ಅಬುಧಾಬಿಯಲ್ಲಿ ಗುರುವಾರ ನಡೆದ ಐಪಿಎಲ್ ನ 13 ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಶೂನ್ಯ ರನ್ ಗೆ ಕೋಟ್ರೆಲ್ ಬೌಲಿಂಗ್ನಲ್ಲಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್ 10ರನ್ ಗಳಿಸಿ ಔಟಾಗಿದ್ದು, ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಗೆ ಬೆನ್ನೆಲುಬಾಗಿ ನಿಂತರು.
ಇಶಾನ್ ಕಿಶನ್ 28ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು, ರೋಹಿತ್ ಶರ್ಮ 45 ಎಸೆತಗಳಲ್ಲಿ 70 ರನ್ ಗಳಿಸುವ ಮೂಲಕ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಔಟಾದರು. ನಂತರ ಕೈರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದು, ಕೈರನ್ ಪೊಲಾರ್ಡ್ 20 ಎಸೆತಗಳಲ್ಲಿ 47 ಹಾಗೂ ಹಾಗೂ ಹಾರ್ದಿಕ್ ಪಾಂಡ್ಯ 11 ಎಸೆತಗಳಲ್ಲಿ 30 ರನ್ ಇವರ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್ ನಷ್ಟಕ್ಕೆ 191 ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಂಭದಲ್ಲಿ ಮಾಯಂಕ್ ಅಗರ್ವಾಲ್ 25 ರನ್ ಗಳಿಸಿ ಬೂಮ್ರಾ ಬೌಲಿಂಗ್‌ನಲ್ಲಿ ಔಟಾದರು. ನಂತರ ಬಂದ ಕರುಣ್ ನೈರ್ ಶೂನ್ಯ ರನ್ ಗೆ ಔಟಾಗಿದ್ದು, ನಾಯಕ ಕೆ.ಎಲ್. ರಾಹುಲ್ ಕೂಡ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಿಕೋಲಸ್ ಪೂರನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು, 27 ಎಸೆತಗಳಲ್ಲಿ 44 ರನ್ ಗಳಿಸುವ ಮೂಲಕ ಔಟಾದರು. ಬಳಿಕ ಬಂದ ಮ್ಯಾಕ್ಸ್ ವೆಲ್ ಕೂಡ ಕೇವಲ 11ರನ್ ಗಳಿಸಿ ರಾಹುಲ್ ಚಾಹರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಸತತ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಗುರಿ ತಲುಪಲು ವಿಫಲವಾಯಿತು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 48ರನ್ ಗಳ ಭರ್ಜರಿ ಜಯ ಸಾಧಿಸಿತು.