ಅಹಮದಾಬಾದ್: ಇಂದು ರಾತ್ರಿ ಅಹಮದಾಬಾದ್ ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ 15ನೇ ಆವೃತ್ತಿಯ ಕ್ವಾಲಿಫೈಯರ್ -2 ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಖ್ನೋ ಸೂಪರ್ ಜಯಿಂಟ್ಸ್ ತಂಡವನ್ನು 14 ರನ್ ಗಳಿಂದ ಮಣಿಸಿದ ಆರ್ಸಿಬಿ ಭರ್ಜರಿ ಜಯದೊಂದಿಗೆ ಫೈನಲ್ ಪ್ರವೇಶಿಸಲು ಕಾರ್ಯತಂತ್ರ ರೂಪಿಸಿದೆ. ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟನ್ಸ್ ಎದುರು ಸೋತ ರಾಜಸ್ಥಾನ ರಾಯಲ್ಸ್ ಕೂಡ ಫೈನಲ್ ಪ್ರವೇಶಕ್ಕೆ ಭಾರಿ ಸಿದ್ಧತೆ ಮಾಡಿಕೊಂಡಿದೆ.
ಇಂದು ರಾತ್ರಿ 7.30 ಕ್ಕೆ ಪಂದ್ಯ ಆರಂಭವಾಗಲಿದ್ದು, ಉಭಯ ತಂಡಗಳು ಗೆಲುವಿಗೆ ಕಾರ್ಯತಂತ್ರ ರೂಪಿಸಿವೆ. ಆರ್.ಸಿ.ಬಿ. ಇಂದಿನ ಪಂದ್ಯವನ್ನು ಜಯಿಸಿದರೆ ಫೈನಲ್ ಪ್ರವೇಶಿಸುವುದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2009, 2011 ಮತ್ತು 2016ರಲ್ಲಿ ಆರ್ಸಿಬಿ ರನ್ನರ್-ಅಪ್ ಆಗಿದೆ.
ರಾಜಸ್ತಾನ ರಾಯಲ್ಸ್ ತಂಡ ಗೆಲುವು ಸಾಧಿಸಿದರೆ 2008ರ ಉದ್ಘಾಟನೆ ಆವೃತ್ತಿಯ ಚಾಂಪಿಯನ್ ತಂಡ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದಂತಾಗುತ್ತದೆ.
ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ರಜತ್ ಪಾಟಿದಾರ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅದೇ ರೀತಿ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಮೇಲೆ ನಿರೀಕ್ಷೆ ಹೆಚ್ಚಿದೆ.