ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ 16 ರನ್ ಗಳಿಸಿ ಔಟಾದರು. ನಂತರ ಶುಬ್ ಮನ್ ಗಿಲ್ ಕೂಡ 33ರನ್ ಗಳಿಸಿದ್ದು, ಅಗರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಶ್ರೇಯಸ್ ಅಯ್ಯರ್ 19ರನ್ ಗಳಿಸಿದ್ದು ಆ್ಯಡಂ ಝಂಪಾ ಬೌಲಿಂಗ್‌ನಲ್ಲಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸುವ ಮೂಲಕ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತರು. ನಂತರ ಬಂದ ಕೆ.ಎಲ್. ರಾಹುಲ್ ಕೇವಲ 5ರನ್ ಗಳಿಸಿ ಅಗರ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ಭಾರತ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದ ನಾಯಕ ವಿರಾಟ್ ಕೊಹ್ಲಿ 63ರನ್ ಗಳಿಸಿದ್ದು, ಹಝೆಲ್ ವುಡ್ ಬೌಲಿಂಗ್‌ನಲ್ಲಿ ಔಟಾದರು. ನಂತರ ಹಾರ್ದಿಕ್ ಪಾಂಡ್ಯ 76 ಎಸೆತಗಳಲ್ಲಿ (92) ಹಾಗೂ ರವೀಂದ್ರ ಜಡೇಜಾ 50 ಎಸೆತಗಳಲ್ಲಿ (66) ಇವರಿಬ್ಬರ ಭರ್ಜರಿ ಜೊತೆಯಾಟದಿಂದ ಭಾರತ ತಂಡ ಮುನ್ನೂರರ ಗಡಿ ಮುಟ್ಟಿತು. ಒಟ್ಟಾರೆ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 302ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡದಲ್ಲಿ ಆರಂಭಿಕ ಆಟಗಾರ ಲಾಬುಸ್ಚಾಗ್ನೆ 7 ರನ್ ಗಳಿಸಿ ನಟರಾಜನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸ್ಟೀವ್ ಸ್ಮಿತ್ 7 ರನ್ ಗಳಿಸಿ ಔಟಾದರೆ ಹೆನ್ರಿಕ್ಸ್ 22ರನ್ ಗಳಿಸಿದ್ದು, ಶಾರ್ದೂಲ್ ಠಾಕುರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾಗಿದ್ದ ನಾಯಕ ಆರೊನ್ ಫಿಂಚ್ 75 ರನ್ ಗಳಿಸಿದ್ದು ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಔಟಾದರು. ಸತತ ವಿಕೆಟ್ ಗಳನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಗ್ಲೇನ್ ಮ್ಯಾಕ್ಸ್ ವೆಲ್ ಅರ್ಧ ಶತಕ ಗಳಿಸುವ ಮೂಲಕ ನೆರವಾದರು.
ಗ್ಲೇನ್ ಮ್ಯಾಕ್ಸ್ ವೆಲ್ 38 ಎಸೆತಗಳಲ್ಲಿ (59) ರನ್ ಗಳಿಸಿದ್ದು ಜಸ್ಪ್ರಿತ್ ಬುಮ್ರಾಗೆ ತಮ್ಮ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯ ತಂಡ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 289ರನ್ ಗಳಿಸಿ ಗುರಿ ತಲುಪುವಲ್ಲಿ ವಿಫಲವಾಯಿತು. ಭಾರತ ತಂಡ 13 ರನ್ ಗಳಿಂದ ರೋಚಕ ಜಯ ಸಾಧಿಸಿದ್ದು, ಈ ಮೂಲಕ ಭಾರತ ತಂಡ 3ಏಕದಿನ ಸರಣಿಯಲ್ಲಿ ಕೊನೆಯ 1 ಪಂದ್ಯದಲ್ಲಿ ಜಯ ಗಳಿಸಿದೆ.