ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದೆ. ಈ ಕುರಿತು ಕೇಂದ್ರ ಸಚಿವ, ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
ಸಚಿವರು, ಧಾರವಾಡದಲ್ಲಿ ಶೀಘ್ರವೇ ಆಧಾರ್ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆ. ನಮ್ಮ ಕರ್ನಾಟಕದಲ್ಲಿ ಈ ಮೊದಲು 6 ಜಿಲ್ಲೆಗಳಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಇತ್ತೀಚಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈ ಸೌಲಭ್ಯವನ್ನು ರಾಜ್ಯದ ಹೆಚ್ಚಿನ ಜನರಿಗೆ ಅನಕೂಲವಾಗುವ ದೃಷ್ಟಿಯಿಂದ ಉಳಿದ ಪ್ರತಿ ಜಿಲ್ಲೆಗೂ ಒಂದರಂತೆ ರಾಜ್ಯಾದ್ಯಂತ 19 ಕೇಂದ್ರಗಳನ್ನು ಸ್ಥಾಪಿಸಲಾಯಿತು ಎಂದು ಹೇಳಿದ್ದಾರೆ.
ಆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಮಾತ್ರ ಆಧಾರ್ ಕೇಂದ್ರ ಮುಂದುವರಿದಿತ್ತು. ಜಿಲ್ಲೆಗೆ ಒಂದೇ ಕೇಂದ್ರ ಎಂಬ ಹೊಸ ನಿಯಮದಂತೆ ಧಾರವಾಡದ ಕೇಂದ್ರವನ್ನು ಸ್ಥಗಿತಗೊಳಿಸಲಾಗಿತ್ತು. ನಾನು ಧಾರವಾಡ ಕೇಂದ್ರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮರು ಪ್ರಾರಂಭಮಾಡಬೇಕೆಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ ಅವರಿಗೆ ಪತ್ರ ನೀಡಿ ವಿನಂತಿಸಿದ್ದೆನು ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅರವಿಂದ ಬೆಲ್ಲದ ಅವರು ಸಹಿತ ಧಾರವಾಡದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಾಪನೆಗೆ ನನಗೆ ವಿನಂತಿಸಿದ್ದರು. ಕೂಡಲೇ ನನ್ನ ಮನವಿಗೆ ಸ್ಪಂದಿಸಿ ಧಾರವಾಡ ಜಿಲ್ಲೆಗೆ ಅದರಲ್ಲಿಯೂ ಧಾರವಾಡದಲ್ಲಿ ಕೇಂದ್ರದ ಅವಶ್ಯಕತೆಯನ್ನು ಮನಗಂಡು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗ ಸೂಚನೆ ನೀಡಿದ್ದು, ಧಾರವಾಡದಲ್ಲಿಯೂ ಒಂದು ಕೇಂದ್ರವನ್ನು ವಿಶೇಷ ಪ್ರಕರಣದಡಿ ಸ್ಥಾಪಿಸುವಂತೆ ಆದೇಶಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆದಷ್ಟು ಬೇಗನೆ ಧಾರವಾಡ ಆಧಾರ್ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆಗೆ ಶೀಘ್ರವಾಗಿ ಟೆಂಡರ್ ಕರಿಯಲಾಗುವದು. ನನ್ನ ಮನವಿಗೆ ಸ್ಪಂದಿಸಿ ನಮ್ಮ ಧಾರವಾಡ ಜಿಲ್ಲೆಯ ಲಕ್ಷಾಂತರ ಜನರಿಗೆ ಅನಕೂಲವಾಗುವಂತೆ ಮತ್ತೊಂದು ಆಧಾರ್ ಸೇವಾ ಮತ್ತು ನಿರ್ವಹಿಸುವ ಕೇಂದ್ರವನ್ನು ಸ್ಥಾಪಿಸಲು ಒಪ್ಪಿಗೆ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳು ಎಂದು ಸಚಿವರು ತಿಳಿಸಿದ್ದಾರೆ.
ಏನಿದು ಆಧಾರ್ ಸೇವಾ ಕೇಂದ್ರ?: ಆಧಾರ್ ಸೇವಾ ಕೇಂದ್ರ (ASK) ಎಂದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನಿರ್ವಹಿಸುವ ಕೇಂದ್ರವಾಗಿದೆ. ಈಗ ಭಾರತದಲ್ಲಿ ಆಧಾರ್ ಕಾರ್ಡ್ ಅತಿ ಮುಖ್ಯ ದಾಖಲೆಯಾಗಿದೆ.
ಆಧಾರ್ ಸೇವಾ ಕೇಂದ್ರದಲ್ಲಿ ಜನರು ಹೊಸ ಆಧಾರ್ ನೋಂದಣಿ, ಬಯೋಮೆಟ್ರಿಕ್ ಮತ್ತು ಡೆಮೊಗ್ರಾಫಿಕ್ ಅಪ್‌ಡೇಟ್‌ಗಳು (ಹೆಸರು, ವಿಳಾಸ, ಮೊಬೈಲ್, ಇಮೇಲ್) ಮತ್ತು ದೂರುಗಳ ಪರಿಹಾರದಂತಹ ಎಲ್ಲಾ ಆಧಾರ್ ಸೇವೆಗಳನ್ನು ಪಡೆಯಬಹುದು.
ಆಧಾರ್ ಸೇವಾ ಕೇಂದ್ರವು ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನ ಕಾರ್ಯ ನಿರ್ವಹಣೆ ಮಾಡುತ್ತದೆ. ಆಧಾರ್ ಸ್ವೀಕೃತಿ ಮತ್ತು ವಿಳಾಸ, ಹೆಸರು, ಲಿಂಗ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ಫೋಟೋ, ಬೆರಳಚ್ಚು ಮತ್ತು ಐರಿಸ್ ಸೇರಿದಂತೆ ಬಯೋಮೆಟ್ರಿಕ್ ನವೀಕರಣಗಳ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಯುಐಡಿಎಐ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸಿ ಜನರು ಈ ಕೇಂದ್ರಕ್ಕೆ ಭೇಟಿ ನೀಡುವ ಸೌಲಭ್ಯವನ್ನು ಒದಗಿಸಲಾಗುತ್ತದೆ. ಅಪಾಯಿಂಟ್‌ಮೆಂಟ್ ಪಡೆಯುವಾಗ ಅಲ್ಲಿ ಆಧಾರ್ ಸೇವಾ ಕೇಂದ್ರದಲ್ಲಿ ಸೇವೆಗಳನ್ನು ಪಡೆಯಲು ಅನುಕೂಲಕರ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು. ಆಧಾರ್ ಸೇವಾ ಕೇಂದ್ರ ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ.
5 ರಿಂದ 15 ವರ್ಷದ ಮಕ್ಕಳಿಗೆ ಆಧಾರ್ ನೋಂದಣಿ ಮತ್ತು ಕಡ್ಡಾಯ ಬಯೋಮೆಟ್ರಿಕ್ ನವೀಕರಣವು ಉಚಿತವಾಗಿದೆ. ಇತರ ಎಲ್ಲಾ ನವೀಕರಣಗಳು/ ತಿದ್ದುಪಡಿಗಳಿಗೆ, ಪ್ರತಿ ವಹಿವಾಟಿಗೆ 50 ರೂ. ನಾಮಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ.

