ತಿರುಪತಿ: ತಿರುಪತಿ ದೇವಸ್ಥಾನದಲ್ಲಿ ಕುಡುಕನೊಬ್ಬ ದೇವಸ್ಥಾನದ ಕಾಂಪೌಂಡ್ ಒಳಗೆ ನುಗ್ಗಿ ಗೋಪುರ ಏರಿದ್ದಲ್ಲದೇ ಕಳಶವನ್ನು ಎಳೆಯಲೆತ್ನಿಸಿರುವ ಘಟನೆ ನಡೆದಿದೆ. ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.
ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಭದ್ರತಾ ಲೋಪವಾಗಿದೆ ಎಂದು ಹೇಳಲಾಗುತ್ತಿದೆ. ಶುಕ್ರವಾರ ರಾತ್ರಿ ದೇಗುಲದಲ್ಲಿ ಏಕಾಂತ ಸೇವೆ ಮುಗಿದ ಸಂದರ್ಭದಲ್ಲಿ ಕುಡುಕ ವ್ಯಕ್ತಿಯೋರ್ವ ದೇವಸ್ಥಾದ ಕಾಂಪೌಂಡ್ ಹಾರಿ ಒಳನುಗ್ಗಿದ್ದಾನೆ. ಬಳಿಕ ದೇವಸ್ಥಾನದ ಗೋಪುರವೇರಿದ್ದು, ನಂತರ ಅಲ್ಲಿರುವ ಕಳಶಗಳನ್ನು ಎಳೆಯಲು ಯತ್ನಿಸಿದ್ದಾನೆ. ಘಟನೆ ದೇವಸ್ಥಾನದಲ್ಲಿದ್ದ ಭಕ್ತರಿಗೆ ಆತಂಕವನ್ನುಂಟು ಮಾಡಿದೆ.
ಈ ವೇಳೆ ಎಚ್ಚೆತ್ತ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಗೋಪುರವೇರಿ ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡದ ಪೆದ್ದಮಲ್ಲ ರೆಡ್ಡಿ ಕಾಲೋನಿ ನಿವಾಸಿ ತಿರುಪತಿ ಎಂದು ಗುರುತಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವ್ಯಕ್ತಿಯ ವಿಚಾರಣೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ. ತನಿಖೆ ಬಳಿಕ ಮಾಹಿತಿ ನೀಡುವುದಾಗಿ ಡಿಎಸ್ ಪಿ ಭಕ್ತವತ್ಸಲಂ ತಿಳಿಸಿದ್ದಾರೆ.

