ಕೊಡಗು : ಕೊಡಗಿನ ಕುಡಿಗೆಯಲ್ಲಿರುವ ಪ್ರತಿಷ್ಠಿತ ಸೈನಿಕ ಶಾಲೆಯಲ್ಲಿ 2027–28ನೇ ಶೈಕ್ಷಣಿಕ ಸಾಲಿನ 6ನೇ ಮತ್ತು 9ನೇ ತರಗತಿಗಳ ಪ್ರವೇಶಕ್ಕಾಗಿ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಅರ್ಹ ಬಾಲಕ ಮತ್ತು ಬಾಲಕಿಯರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈ ಪ್ರವೇಶ ಪರೀಕ್ಷೆಯನ್ನು ನಡೆಸಲಿದ್ದು, ಪರೀಕ್ಷೆಯು 2027ರ ಜನವರಿ 31 ರಂದು ನಡೆಯಲಿದೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳನ್ನಾಗಿ ರೂಪಿಸಲು ಅಗತ್ಯವಿರುವ ಶೈಕ್ಷಣಿಕ ಮತ್ತು ದೈಹಿಕ ತರಬೇತಿಯನ್ನು ಈ ವಸತಿ ಶಾಲೆಯಲ್ಲಿ ನೀಡಲಾಗುತ್ತದೆ. ಕರ್ನಾಟಕದ ಮೂಲ ನಿವಾಸಿಗಳಾಗಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಹಾಗೂ ರಕ್ಷಣಾ ಸಚಿವಾಲಯದ ವತಿಯಿಂದ ವಿದ್ಯಾರ್ಥಿವೇತನ (ಸ್ಕಾಲರ್ ಶಿಪ್) ಸೌಲಭ್ಯವೂ ಲಭ್ಯವಿದೆ.
ಪ್ರವೇಶ ತರಗತಿಗಳು: 6ನೇ ಮತ್ತು 9ನೇ ತರಗತಿ (ಬಾಲಕ ಮತ್ತು ಬಾಲಕಿಯರು).
ಅರ್ಜಿ ಸಲ್ಲಿಸಲು ಡಿಸೆಂಬರ್ 02 ಕೊನೆಯ ದಿನವಾಗಿದೆ.
ಪರೀಕ್ಷಾ ದಿನಾಂಕ: 31 ಜನವರಿ 2027.
ಅರ್ಜಿ ಸಲ್ಲಿಸಲು https://exams.nta.nic.in/sainik-school-society/ ಅಥವಾ ಶಾಲೆಯ ಅಧಿಕೃತ ಜಾಲತಾಣ www.sainikschoolkodagu.edu.in ಗೆ ಭೇಟಿ ನೀಡಬಹುದಾಗಿದೆ.
ಪರೀಕ್ಷಾ ವಿಧಾನ, ಪಠ್ಯಕ್ರಮ, ಶುಲ್ಕ ವಿವರ, ವಯೋಮಿತಿ ಮತ್ತು ಮೀಸಲಾತಿ ನಿಯಮಗಳ ಸಂಪೂರ್ಣ ಮಾಹಿತಿಗಾಗಿ ಆಸಕ್ತ ಪೋಷಕರು ಹಾಗೂ ಅಭ್ಯರ್ಥಿಗಳು ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿ ಕೈಪಿಡಿಯನ್ನು ಪರಿಶೀಲಿಸುವಂತೆ ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಎಸ್ಕೆಯು ನೂತನ ಪರೀಕ್ಷಾಂಗ ಕುಲಸಚಿವರಾಗಿ ಪ್ರೊ. ಪಿ. ಕಣ್ಣನ್ ಅಧಿಕಾರ ಸ್ವೀಕಾರ
ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಮೌಲ್ಯಮಾಪನ (ಪರೀಕ್ಷಾಂಗ) ಕುಲಸಚಿವರಾಗಿ ಪ್ರೊ. ಪಿ. ಕಣ್ಣನ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಪ್ರೊ. ಪಿ. ಕಣ್ಣನ್ ಅವರು ಮೂಲತಃ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ.
ಇದುವರೆಗೆ ವಿಎಸ್ಕೆಯು ಮೌಲ್ಯಮಾಪನ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ. ಎನ್. ಎಂ. ಸಾಲಿಯ ಅವರನ್ನು ಮಾತೃ ಸಂಸ್ಥೆಗೆ ಮರಳಿ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಾಕಿ ಟ್ರಾಫಿಕ್ ಇ-ಚಲನ್ ಮತ್ತು ಸಾರಿಗೆ ದಂಡ ಪಾವತಿಗೆ ಶೇ. 50 ರಿಯಾಯಿತಿ
ರಾಷ್ಟ್ರೀಯ ಲೋಕ್ ಅದಾಲತ್ ಅಂಗವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಯಲ್ಲಿ ಶೇಕಡ 50 ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ಘೋಷಿಸಿದ್ದು, 1991 ರಿಂದ 2025ರ ಅವಧಿಯಲ್ಲಿ ದಾಖಲಾಗಿ ಪಾವತಿಗೆ ಬಾಕಿ ಇರುವ ಟ್ರಾಫಿಕ್ ಇ-ಚಲನ್ ಹಾಗೂ ಸಾರಿಗೆ ಇಲಾಖೆಯ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ.
ಈ ವಿಶೇಷ ಕೊಡುಗೆಯು ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, ನವೆಂಬರ್ 21 ರಿಂದ ಡಿಸೆಂಬರ್ 11 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಈ ನಿಗದಿತ ಅವಧಿಯೊಳಗೆ ದಂಡ ಪಾವತಿಸಿ ಪ್ರಯೋಜನ ಪಡೆಯಬಹುದಾಗಿದೆ.
ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಯ ನಿಯಮಾವಳಿಗಳ ಅನ್ವಯ 1991 ರಿಂದ 2025 ರವರೆಗೆ ದಾಖಲಾಗಿ ಬಾಕಿ ಉಳಿದಿರುವ ಅರ್ಹ ಸಂಚಾರ ಇ-ಚಲನ್ ಮತ್ತು ಸಾರಿಗೆ ಇಲಾಖೆಯ ಪ್ರಕರಣಗಳಿಗೆ ಮಾತ್ರ ಈ ಶೇ. 50 ರಿಯಾಯಿತಿ ಅನ್ವಯವಾಗುತ್ತದೆ.
ಸಾರ್ವಜನಿಕರು ನ್ಯಾಯಾಲಯ ಅಥವಾ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಹಲವು ವೇದಿಕೆಗಳನ್ನು ಕಲ್ಪಿಸಲಾಗಿದೆ.ಕರ್ನಾಟಕ ಒನ್ ಕೇಂದ್ರ, ಸಂಚಾರಿ ಪೊಲೀಸ್ ಠಾಣೆ, ಅಧಿಕೃತ ಆನ್ ಲೈನ್ ಪೋರ್ಟಲ್ಗಳು (ಪರಿವಾಹನ್ ಪೋರ್ಟಲ್ / ಕೆ.ಎಸ್.ಪಿ ಆಪ್), ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪಾವತಿಸಬಹುದಾಗಿದೆ.
ರಾಜ್ಯಾದ್ಯಂತ ಪೊಲೀಸ್ ಹಾಗೂ ನ್ಯಾಯಾಲಯಗಳಲ್ಲಿ ಲಕ್ಷಾಂತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಈ ಅವಕಾಶ ನೀಡಲಾಗಿದೆ. ವಾಹನ ಸವಾರರು ಕಾನೂನು ಸಂಕಷ್ಟಗಳಿಂದ ಮುಕ್ತಿ ಪಡೆಯಲು ಯಾವುದೇ ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ರಿಯಾಯಿತಿ ದರದಲ್ಲಿ ದಂಡ ಪಾವತಿಸಿ ಸಹಕರಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮನವಿ ಮಾಡಿದೆ.
ಹೆಚ್ಚಿನ ವಿವರಗಳಿಗಾಗಿ ಸಮೀಪದ ತಾಲ್ಲೂಕು ಕಾನೂನು ಸೇವಾ ಸಮಿತಿ, ಸಂಚಾರಿ ಪೊಲೀಸ್ ಠಾಣೆ ಅಥವಾ ಆರ್ಟಿಒ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

