HomeKarnatakaಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ: ಮಕ್ಕಳ ಪ್ರತಿಭೆ, ಕೌಶಲ್ಯಕ್ಕೆ ಮೆಚ್ಚುಗೆ

ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ: ಮಕ್ಕಳ ಪ್ರತಿಭೆ, ಕೌಶಲ್ಯಕ್ಕೆ ಮೆಚ್ಚುಗೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಶುಕ್ರವಾರ ಕುಪ್ಪಗಡ್ಡೆ ಗ್ರಾಮದಲ್ಲಿ ಪ್ರವಾಸದ ವೇಳೆ ಕುಪ್ಪಗಡ್ಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದರು

ಶಾಲೆಯ ಮೂಲಸೌಕರ್ಯ, ಶೈಕ್ಷಣಿಕ ವಾತಾವರಣ ಹಾಗೂ ಕಲಿಕೆಯ ಗುಣಮಟ್ಟವನ್ನು ಪರಿಶೀಲಿಸಿದರು. ಈ ಶಾಲೆಯಲ್ಲಿ ಎಲ್‌.ಕೆ.ಜಿ.ಯಿಂದಲೇ ಶಿಕ್ಷಣ ನೀಡಲಾಗುತ್ತಿದ್ದು, ಕುಪ್ಪಗಡ್ಡೆ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಕೂಡ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆತ ಸಚಿವರು, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಅವರೊಂದಿಗೆ ಕೆಲಕಾಲ ಸಂವಾದ ನಡೆಸಿದರು. ಶಾಲೆಯ ಕರಾಟೆ ವಿದ್ಯಾರ್ಥಿಗಳ ಕೌಶಲ್ಯ ಮತ್ತು ಪ್ರತಿಭೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಮಕ್ಕಳ ಶೂ ಹಾಗೂ ಚಪ್ಪಲಿಗಳನ್ನು ಪರಿಶೀಲಿಸಿದ ಸಚಿವರು, ವಿದ್ಯಾರ್ಥಿಗಳೊಂದಿಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸವಿದರು. ಶಾಲೆಯ ಶೈಕ್ಷಣಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ಕುಪ್ಪಗಡ್ಡೆ ಸರ್ಕಾರಿ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆಗಿ ಮೇಲ್ದರ್ಜೆಗೇರಿಸುವ ಕುರಿತು ಭರವಸೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಪ್ಪಗಡ್ಡೆಯಲ್ಲಿ ₹29.69 ಕೋಟಿ ವೆಚ್ಚದಲ್ಲಿ 110/11 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಶಂಕುಸ್ಥಾಪನೆ

ಸೊರಬ ತಾಲ್ಲೂಕಿನ ಕುಪ್ಪಗಡ್ಡೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಹುವರ್ಷಗಳ ಬೇಡಿಕೆಯಾಗಿದ್ದ 110/11 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಕೊನೆಗೂ ಚಾಲನೆ ದೊರೆತಿದೆ. ಸಚಿವ ಮಧು ಬಂಗಾರಪ್ಪ ಅವರು ಶುಕ್ರವಾರ ಕುಪ್ಪಗಡ್ಡೆ ಗ್ರಾಮದಲ್ಲಿ ₹29.69 ಕೋಟಿ ಅಂದಾಜು ವೆಚ್ಚದ ನೂತನ ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಮಧು ಬಂಗಾರಪ್ಪ ಅವರು ಮೊದಲ ಬಾರಿಗೆ ಶಾಸಕರಾಗಿದ್ದ ಸಂದರ್ಭದಲ್ಲಿ ಈ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಮಂಜೂರಾತಿ ಕೊಡಿಸಿದ್ದರು. ಆದರೆ ಅರಣ್ಯ ಇಲಾಖೆಯ ಅನುಮತಿ ಸೇರಿದಂತೆ ವಿವಿಧ ಕಾರಣಗಳಿಂದ ಕಾಮಗಾರಿ ಆರಂಭವಾಗದೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಸಚಿವರೇ ಮುತುವರ್ಜಿ ವಹಿಸಿ ಅಗತ್ಯ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಯೋಜನೆಗೆ ಮರುಚಾಲನೆ ನೀಡಿದ್ದಾರೆ.

ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ವಿದ್ಯುತ್ ಉಪಕೇಂದ್ರವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಈ ವಿದ್ಯುತ್ ಉಪಕೇಂದ್ರದಿಂದ ಕುಪ್ಪಗಡ್ಡೆ ಮಾತ್ರವಲ್ಲದೆ ಬೊಮ್ಮನಹಳ್ಳಿ, ತೊಗರ್ಸಿ, ಉದ್ರಿ, ಗುಡಗಿನಕೊಪ್ಪ, ನಿಟ್ಟಕ್ಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲಿದೆ. ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳು ಕಡಿಮೆಯಾಗಿ, ರೈತರು, ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ನೆರವಾಗಲಿದೆ.

₹1 ಕೋಟಿ ವೆಚ್ಚದಲ್ಲಿ ರಿಂಗ್ ರಸ್ತೆ ಕಾಮಗಾರಿಗೆ ಚಾಲನೆ

ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕುಪ್ಪಗಡ್ಡೆ ಗ್ರಾಮದ ರಿಂಗ್ ರಸ್ತೆಯ ಮುಂದುವರಿದ ಕಾಮಗಾರಿಗೂ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು ₹1 ಕೋಟಿ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಬಸವೇಶ್ವರ ದೇವಸ್ಥಾನಕ್ಕೆ ಭೇಟಿ

ಕುಪ್ಪಗಡ್ಡೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ನೂತನ ರಥ ನಿರ್ಮಾಣ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.

ಮುಖಂಡರ ಆರೋಗ್ಯ ವಿಚಾರಣೆ

ಸೊರಬ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕುಪ್ಪಗಡ್ಡೆಯ ದಾನಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿರುವ ವಿಷಯ ತಿಳಿದು ಸಚಿವರು ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಶೀಘ್ರ ಗುಣಮುಖರಾಗಿ ಎಂದಿನಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.

ಅದೇ ರೀತಿ, ಕುಪ್ಪಗಡ್ಡೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕಮಲಾಕ್ಷಿ ಅವರ ಪತಿ ಹಾಗೂ ಕಾಂಗ್ರೆಸ್ ಮುಖಂಡ ಸತೀಶ್ ಅವರು ಇತ್ತೀಚೆಗೆ ವಿದ್ಯುತ್ ಕಂಬ ಏರುವ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ನಿವಾಸಕ್ಕೂ ಭೇಟಿ ನೀಡಿದ ಸಚಿವರು ಆರೋಗ್ಯ ವಿಚಾರಿಸಿ, ಶೀಘ್ರ ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸಿದರು. ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.

ಕುರಿ ಕಳೆದುಕೊಂಡ ರೈತನಿಗೆ ಪರಿಹಾರ ನೀಡಲು ಸೂಚನೆ

ಸೊರಬ ವಿಧಾನಸಭಾ ಕ್ಷೇತ್ರದ ಸೂರಣಗಿ ಗ್ರಾಮದ ರಾಮಪ್ಪ ಅವರಿಗೆ ಸೇರಿದ ಕುರಿ-ಕೋಳಿ ಸಾಕಾಣಿಕೆ ಶೆಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ನೂರಾರು ಕುರಿ ಮತ್ತು ಕೋಳಿಗಳು ಬೆಂಕಿಗೆ ಆಹುತಿಯಾಗಿ ಮೃತಪಟ್ಟಿವೆ. ಘಟನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಮಪ್ಪ ಅವರ ಮನೆಗೆ ಸಚಿವ ಮಧು ಬಂಗಾರಪ್ಪ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು.

ಅಗ್ನಿ ಅವಘಡದಿಂದ ಸಂಭವಿಸಿರುವ ನಷ್ಟದ ಕುರಿತು ಮಾಹಿತಿ ಪಡೆದ ಸಚಿವರು, ಸಂತ್ರಸ್ತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ ಪಾಟೀಲ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ತಬಲಿ ಬಂಗಾರಪ್ಪ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಕಾಂಗ್ರೆಸ್ ಮುಖಂಡ ಎಂ.ಬಿ. ಶೇಖರ್ ಸೇರಿದಂತೆ ಇತರರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular