ನವದೆಹಲಿ : ಜ್ವರ ಮತ್ತು ಸೋಂಕಿನ ಕಾರಣದಿಂದ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಗುಣಮುಖರಾಗಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 24 ರಂದು ರಾತ್ರಿ 10:22ಕ್ಕೆ ಸೋನಿಯಾ ಗಾಂಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ದೇಹದ ಒಳವ್ಯವಸ್ಥೆಯ ಸೋಂಕಿನ (Systemic Infection) ಹಿನ್ನೆಲೆಯಲ್ಲಿ ಡಾ. ಡಿ.ಎಸ್. ರಾಣಾ, ಡಾ. ಎಸ್. ನಂದಿ ಮತ್ತು ಡಾ. ಅರೂಪ್ ಬಸು ಅವರ ನೇತೃತ್ವದ ತಂಡ ಇವರಿಗೆ ಆಂಟಿಬಯೋಟಿಕ್ಸ್ ಚಿಕಿತ್ಸೆ ನೀಡಿತ್ತು.
ಆರೋಗ್ಯ ಸ್ಥಿತಿ: ಸದ್ಯ ಅವರ ಎಲ್ಲಾ ಆರೋಗ್ಯ ನಿಯತಾಂಕಗಳು (Parameters) ಸಹಜ ಸ್ಥಿತಿಯಲ್ಲಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ವೈದ್ಯರ ಪ್ರಕಾರ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ಸಹ, ಮುಂದಿನ ಕೆಲವು ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಲು ಮತ್ತು ವೈದ್ಯರ ಸಲಹೆಯಂತೆ ಫಾಲೋ-ಅಪ್ ಚಿಕಿತ್ಸೆ ಮುಂದುವರಿಸಲು ಸೂಚಿಸಲಾಗಿದೆ. ಆಸ್ಪತ್ರೆಯ ಮಂಡಳಿಯ ಅಧ್ಯಕ್ಷರಾದ ಡಾ. ಅಜಯ್ ಸ್ವರೂಪ್ ಅವರು ಸೋನಿಯಾ ಗಾಂಧಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕೃತವಾಗಿ ಖಚಿತಪಡಿಸಿದ್ದಾರೆ.

