ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು ಭಾರೀ ಸುದ್ದಿಯಾಗಿತ್ತು. ಸ್ನೇಹಮಯಿ ಕೃಷ್ಣ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಮಾಡಿದ್ದ ಆರೋಪಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೇಳಿದ್ದರು.
ಗಿರೀಶ್ ಮಟ್ಟಣ್ಣವರ್ ವಿಡಿಯೋ ಒಂದರ ಮೂಲಕ ಸ್ನೇಹಮಯಿ ಕೃಷ್ಣ ವಿರುದ್ಧ ಆರೋಪಗಳನ್ನು ಮಾಡಿದ್ದರು. ಈ ಕುರಿತು ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ತಮ್ಮ ಪೋಸ್ಟ್‌ನಲ್ಲಿ, ‘ಈ ಹಂತದಲ್ಲಿ ಶ್ರೀಮತಿ ಶಾಲಿನಿ ರಜನೀಶ್ ರವರ ಹೆಸರು ಉಲ್ಲೇಖ ಮಾಡಿದ್ದರ ಬಗ್ಗೆ ನಾನು ಕ್ಷಮೆ ಕೇಳಿದನ್ನೇ ಆಧಾರವಾಗಿಟ್ಟುಕೊಂಡು, ನಾನು ಯಾವಾಗಲೂ, ಯಾವುದೇ ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತೇನೆ ಎಂದು ಮಾತನಾಡಲಾಗು ತ್ತಿದೆ’ ಎಂದು ಹೇಳಿದ್ದಾರೆ.
‘ಅದರಲ್ಲೂ ಸೌಜನ್ಯ ಪರ ಹೋರಾಟಗಾರ ಎಂದು ಹೇಳುವ ಗಿರೀಶ್ ಮಟ್ಟಣ್ಣವರ ಈ ಬಗ್ಗೆ ಒಂದು ವೀಡಿಯೋವನ್ನೇ ಬಿಡುಗಡೆ ಮಾಡಿದ್ದಾರೆ. ನಾನು ಯಾವುದೇ ದಾಖಲೆಗಳ ಆಧಾರವಿಲ್ಲದೆ ಸುಳ್ಳು ಆರೋಪಗಳನ್ನು ಮಾಡಿದ್ದರೆ, ನಾನು ಮೊಕದ್ದಮೆ ದಾಖಲು ಮಾಡುತ್ತಿದ್ದಂತೆ, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ತಮ್ಮ ಕುಟುಂಬದ ಹೆಸರಿನಲ್ಲಿ ಪಡೆದಿದ್ದ, 60 ಕೋಟಿ ಮೌಲ್ಯದ 14 ನಿವೇಶನಗಳನ್ನು ಏಕೆ ವಾಪಾಸ್ಸು ಮಾಡುತ್ತಿದ್ದರು?, ಜಾರಿ ನಿರ್ದೇಶನಾ ಲಯದವರು ಇದುವರೆವಿಗೂ 460 ಕೋಟಿ ಮೌಲ್ಯದ ಸ್ವತ್ತುಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು?, ಮುಡಾದ ಹಿಂದಿನ ಆಯುಕ್ತರಾದ ಜಿ.ಟಿ.ದಿನೇಶ್ ಕುಮಾರ್ ರವರನ್ನು ಸುಮಾರು 70 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿ ಇಡುತ್ತಿದ್ದರು?’ ಎಂದು ಪ್ರಶ್ನಿಸಿದ್ದಾರೆ.
‘ನಾನು ದೂರು ದಾಖಲು ಮಾಡಿದ್ದ ಕೇವಲ ಒಂದುವರೆ ವರ್ಷದಲ್ಲಿ ಇಷ್ಟೆಲ್ಲಾ ಕೆಲಸ ಆಗುವಂತೆ ಮಾಡಿದ್ದೇನೆ, ಗಿರೀಶ್ ಮಟ್ಟಣ್ಣವರ್ ರೀತಿಯಲ್ಲಿ ಹದಿಮೂರು ವರ್ಷಗಳಷ್ಟು ಸುದೀರ್ಘ ಸಮಯದಿಂದ, ಸೌಜನ್ಯಳ ಸಾವಿಗೆ ನ್ಯಾಯ ಕೊಡಿಸುವುದಾಗಿ ಹೇಳುವಂತೆ, ನಾನು ಬರೀ ಹೇಳಿಕೆ ಕೊಡುತ್ತಿಲ್ಲ! ಸೌಜನ್ಯ ಪ್ರಕರಣದ ತನಿಖೆಗೆ ಆದೇಶ ಮಾಡಿಸಲಿ’ ಎಂದು ಹೇಳಿದ್ದಾರೆ.

