ಬೆಂಗಳೂರು : ರಾಜಧಾನಿಯಲ್ಲಿ ಹಾಡಹಗಲೇ ಸಿನಿಮೀಯ ಶೈಲಿಯ ಭೀಕರ ದರೋಡೆಯೊಂದು ನಡೆದಿದ್ದು, ದೇವನಹಳ್ಳಿ ಸಮೀಪ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ನಾಲ್ಕು ಬೈಕ್ಗಳಲ್ಲಿ ಬಂದ ಗ್ಯಾಂಗ್ ಬರೋಬ್ಬರಿ 20 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದೆ.
ಬೆಂಗಳೂರಿನ ಯಲಹಂಕದಿಂದ ದೇವನಹಳ್ಳಿಗೆ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ, ಸಿನೆಮಾ ಶೈಲಿಯಲ್ಲಿ ಹಲ್ಲೆ ನಡೆಸಿ 20 ಲಕ್ಷ ರೂಪಾಯಿ ಹಣವನ್ನು ದೋಚಿರುವ ಘಟನೆ ನಡೆದಿದೆ.ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆಯ ರಾಷ್ಟ್ರೀಯ ಹೆದ್ದಾರಿ 47ರ ಬಳಿ ಇರುವ ಖಾಸಗಿ ಲೇಔಟ್ನಲ್ಲಿ ಈ ಕೃತ್ಯ ನಡೆದಿದೆ.
ನಾಲ್ಕು ಬೈಕ್ಗಳಲ್ಲಿ ಬಂದ ಅಪರಿಚಿತ ದರೋಡೆಕೋರರ ತಂಡವು, ಆಂಧ್ರಪ್ರದೇಶ ಮೂಲದ ವಿಶ್ವ ಪ್ರಸಾದ್ ಮತ್ತು ಅವರ ಜೊತೆಗಿದ್ದ ವ್ಯಕ್ತಿಯ ಮೇಲೆ ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.ಹಲ್ಲೆ ನಡೆಸಿದ ಗ್ಯಾಂಗ್ ವಿಶ್ವ ಪ್ರಸಾದ್ ಅವರ ಬಳಿಯಿದ್ದ 20 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ದೇವನಹಳ್ಳಿಯ ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ದರೋಡೆಕೋರರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

