ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಹುಟ್ಟಿಕೊಳ್ಳುವ ಪ್ರೇಮಕಥೆಗಳು ಎಷ್ಟು ಬೇಗ ಮದುವೆ ಪೀಠದ ವರೆಗೆ ಹೋಗುತ್ತವೆಯೋ, ಅಷ್ಟೇ ವೇಗವಾಗಿ ಮುರಿದು ಬೀಳುತ್ತಿವೆ ಎಂಬುದಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಉದಾಹರಣೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣ ಸ್ನ್ಯಾಪ್‌ಚಾಟ್ (Snapchat) ಮೂಲಕ ಪರಿಚಯವಾಗಿ, ಪರಸ್ಪರ ಪ್ರೀತಿಸಿ ಸಪ್ತಪದಿ ತುಳಿದಿದ್ದ ನವದಂಪತಿಗಳ ಸಂಸಾರ, ಮದುವೆಯಾದ ಕೇವಲ ಎರಡೇ ತಿಂಗಳಿಗೆ ಬೀದಿಗೆ ಬಂದು ನಿಂತಿದೆ ಸಣ್ಣಪುಟ್ಟ ಕೌಟುಂಬಿಕ ಗಲಾಟೆಯ ಕಾರಣಕ್ಕೆ ಪತಿ ತನ್ನನ್ನು ತಿರಸ್ಕರಿಸಿದ್ದಾನೆ ಎಂದು ನೊಂದ ಪತ್ನಿ ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸ್ನ್ಯಾಪ್‌ಚಾಟ್‌ನಲ್ಲಿ ಶುರುವಾಗಿತ್ತು ಲವ್ ಸ್ಟೋರಿ
ಮೂಲಗಳ ಪ್ರಕಾರ, ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿಯ ನಿವಾಸಿಯಾದ ಚೇತನ್ ಹಾಗೂ ಖಾಸಗಿ ಕಂಪನಿಯಲ್ಲಿ ನರ್ಸಿಂಗ್ ವೃತ್ತಿ ಮಾಡಿಕೊಂಡಿದ್ದ ಮಹಿಳೆಯ ನಡುವೆ ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾಗಿತ್ತು. ದಿನಕಳೆದಂತೆ ಇವರಿಬ್ಬರ ನಡುವಿನ ಸ್ನೇಹ ಗಾಢವಾಗಿ ಪ್ರೀತಿಗೆ ತಿರುಗಿತ್ತು. ಪರಸ್ಪರ ಗಾಢವಾಗಿ ಹಚ್ಚಿಕೊಂಡಿದ್ದ ಈ ಜೋಡಿ, ಕೇವಲ ಎರಡು ತಿಂಗಳ ಹಿಂದಷ್ಟೇ ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.
ಮನೆಯವರಿಗೆ ಗೌರವ ಕೊಡಲ್ಲ ಹೆಂಡತಿಯನ್ನು ದೂರ ತಳ್ಳಲು ಗಂಡ ಕೊಟ್ಟ ಕಾರಣವೇನು?
ಮದುವೆಯಾದ ಮಹಿಳೆಗೆ ತಂದೆ-ತಾಯಿ ಇರಲಿಲ್ಲ ಎನ್ನಲಾಗಿದೆ. ಅನಾಥೆಯಾಗಿದ್ದಾಳೆ ಎಂಬ ಪ್ರೀತಿಯಿಂದಲೇ ಕೈಹಿಡಿದಿದ್ದ ಚೇತನ್ ಮತ್ತು ಆಕೆಯ ನಡುವೆ ಮದುವೆಯಾದ ಕೆಲವೇ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳ ಆರಂಭವಾಗಿದೆ.
ಆರೋಪವೇನು?: “ಮನೆಯಲ್ಲಿ ನನ್ನ ತಂದೆ-ತಾಯಿಗೆ ಪತ್ನಿ ಸರಿಯಾಗಿ ಗೌರವ ನೀಡುತ್ತಿಲ್ಲ” ಎಂಬ ಕಾರಣವನ್ನು ಮುಂದಿಟ್ಟುಕೊಂಡು ಚೇತನ್ ಜಗಳವಾಡುತ್ತಿದ್ದ ಎನ್ನಲಾಗಿದೆ. ದಿನಕಳೆದಂತೆ ಈ ಕೌಟುಂಬಿಕ ಕಲಹ ತಾರಕಕ್ಕೇರಿದೆ.
ಎರಡೇ ತಿಂಗಳಿಗೆ ದ್ರೋಹ?: ಈ ಗಲಾಟೆ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಜಂಟಿಯಾಗಿ ಜೀವನ ನಡೆಸಬೇಕಾಗಿದ್ದ ಕೇವಲ ಎರಡೇ ತಿಂಗಳಿಗೆ ಚೇತನ್ “ನನಗೆ ಈ ಹೆಂಡತಿ ಬೇಡ” ಎಂದು ಆಕೆಯನ್ನು ಮನೆಯಿಂದ ದೂರ ತಳ್ಳಿದ್ದಾನೆ
ಮಾದನಾಯಕನಹಳ್ಳಿ ಠಾಣೆ ಮೆಟ್ಟಿಲೇರಿದ ನೊಂದ ಪತ್ನಿ
ಇತ್ತ ಹೆತ್ತ ತಂದೆ-ತಾಯಿಯೂ ಇಲ್ಲದೆ, ಅತ್ತ ನಂಬಿ ಬಂದ ಪತಿಯೂ ಕೈಬಿಟ್ಟಿದ್ದರಿಂದ ದಿಕ್ಕುತೋಚದಂತಾದ ಮಹಿಳೆ ತೀವ್ರವಾಗಿ ನೊಂದಿದ್ದಾರೆ. “ನನಗೆ ನನ್ನ ಗಂಡ ಬೇಕೇ ಬೇಕು” ಎಂದು ಪಟ್ಟು ಹಿಡಿದು ಆಕೆ ಪೊಲೀಸರ ಮೊರೆ ಹೋಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಆನ್‌ಲೈನ್ ಪ್ರೇಮದ ಬೆನ್ನುಬಿದ್ದು ಮದುವೆಯಾಗುವ ಮುನ್ನ ಎಷ್ಟೊಂದು ಯೋಚಿಸಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

