ನಾಮ್ಚಿ: ಸಿಕ್ಕಿಂನ ಸಮರ್ದುಂಗ್ ಬಳಿ ಇರುವ ಜಲವಿದ್ಯುತ್ ಯೋಜನೆಯ ಸುರಂಗ ಮಾರ್ಗದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸುರಂಗದೊಳಗೆ ಅಪಾಯಕಾರಿ ವಿಷಕಾರಿ ಅನಿಲ ಸೋರಿಕೆಯಾಗಿ 7 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ದಕ್ಷಿಣ ಸಿಕ್ಕಿಂನ ಸಮರ್ದುಂಗ್‌ನಲ್ಲಿ ಈ ದುರಂತ ಸಂಭವಿಸಿದೆ. ‘ತೀಸ್ತಾ ಹಂತ VI ಜಲವಿದ್ಯುತ್ ಯೋಜನೆ’ಯ ಸುರಂಗ ಕಾಮಗಾರಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಟೇಲ್ ಎಂಜಿನಿಯರಿಂಗ್ ಸಂಸ್ಥೆಯು ಈ ಯೋಜನೆಯ ನಿರ್ಮಾಣ ಹೊಣೆ ಹೊತ್ತುಕೊಂಡಿದೆ. ದುರಂತದಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದಾರೆ.
ಮೀಥೇನ್ ಅನಿಲ ಸೋರಿಕೆಯಾಗಿ ಸುರಂಗದೊಳಗಿಂದ ಭಾರಿ ಸ್ಫೋಟದ ಶಬ್ಧ ಕೇಳಿಬಂದಿದೆ. ತಕ್ಷಣವೇ ಓಡಿಬಂದು ಕೆಲವರು ಬಚಾವಾದೆವು. ಸ್ಫೋಟ ಸಂಭವಿಸುತ್ತಿದ್ದಂತೆ ಬಂಡೆಗಳು ಕುಸಿದು ಬಿದ್ದು ಹೊರಹೋಗುವ ದಾರಿ ಬಂದ್ ಆಯಿತು.
ಸುರಂಗ ಕುಸಿತದ ಬೆನ್ನಲ್ಲೇ ಸುರಂಗದೊಳಗೆ ಅತ್ಯಂತ ಅಪಾಯಕಾರಿ ‘ಮೀಥೇನ್ ಅನಿಲ’ ಭಾರಿ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಸಾಧನಗಳಿಲ್ಲದೆ ಸುರಂಗದೊಳಗೆ ಹೋಗಲು ಎರಡು ಬಾರಿ ಯತ್ನಿಸಿದರೂ, ಅನಿಲದ ತೀವ್ರತೆಯಿಂದಾಗಿ ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆ ಅನುಭವಿಸಿ ಹಿಂತಿರುಗಬೇಕಾಯಿತು.
ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ಪಡೆ (SDRF), ಸಿಕ್ಕಿಂ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಆಮ್ಲಜನಕ ಸಿಲಿಂಡರ್ ಹಾಗೂ ವಿಶೇಷ ಆಕ್ಸಿಜನ್ ಮಾಸ್ಕ್‌ಗಳನ್ನು ಧರಿಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆರಂಭದಲ್ಲಿ ಸುಮಾರು 19 ಕಾರ್ಮಿಕರು ಒಳಗೆ ಸಿಲುಕಿದ್ದರು. ನಂತರ ರಕ್ಷಣೆಗೆ ಹೋದ ಪಟೇಲ್ ಎಂಜಿನಿಯರಿಂಗ್ ಹಾಗೂ ಎನ್ಎಚ್ಪಿಸಿ ಸಂಸ್ಥೆಯ ಸಿಬ್ಬಂದಿಯೂ ಸೇರಿದಂತೆ ಒಟ್ಟು 20 ರಿಂದ 27 ಜನರು ಒಳಗೆ ಸಿಲುಕಿರುವ ಶಂಕೆ ಇದೆ.
ಎನ್‌ಡಿಆರ್‌ಎಫ್ ಪಡೆಗಳು ಸುರಂಗದ ಕೊನೆಯ ಹಂತವನ್ನು ತಲುಪಿದ ನಂತರವೇ ನೈಜ ಪರಿಸ್ಥಿತಿ ಸ್ಪಷ್ಟವಾಗಲಿದೆ. ಸದ್ಯಕ್ಕೆ ಸುರಂಗದೊಳಗೆ ಸಿಲುಕಿರುವ ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಹೊರತರುವುದೇ ಜಿಲ್ಲಾಡಳಿತ ಹಾಗೂ ಎನ್‌ಡಿಆರ್‌ಎಫ್ ತಂಡದ ಮೊದಲ ಆದ್ಯತೆಯಾಗಿದೆ ಎಣ್ದು ಅಧಿಕಾರಿಗಳು ತಿಳಿಸಿದ್ದಾರೆ.

