ಬೆಂಗಳೂರು: ವಿದ್ಯುತ್ ವ್ಯತ್ಯಯದ ಹಿನ್ನೆಲೆಯಲ್ಲಿ ಇಂದು (ಜುಲೈ 21) ಬೆಳಿಗ್ಗೆ ತಾತ್ಕಾಲಿಕವಾಗಿ ವ್ಯತ್ಯಯಗೊಂಡಿದ್ದ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲು ಸಂಚಾರವನ್ನು ಪುನಃ ಆರಂಭಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.
ಇಂದು ಬೆಳಿಗ್ಗೆ 8.00 ಗಂಟೆ ಸುಮಾರಿಗೆ ವಿದ್ಯುತ್ ವ್ಯತ್ಯಯ ಉಂಟಾದ ಕಾರಣ, ಹಸಿರು ಮಾರ್ಗದಲ್ಲಿ ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಮಾತ್ರ ಶಾರ್ಟ್-ಲೂಪ್ ಸೇವೆ ನಡೆಸಲಾಗಿತ್ತು. ಈ ವೇಳೆ ಯಶವಂತಪುರ ಮತ್ತು ಮಾದಾವರ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಬಿಎಂಆರ್ಸಿಎಲ್ ತಾಂತ್ರಿಕ ತಂಡಗಳು ತುರ್ತು ಕಾರ್ಯಾಚರಣೆ ನಡೆಸಿದ ಬಳಿಕ, ಬೆಳಿಗ್ಗೆ 8.45 ಗಂಟೆಯಿಂದ ಹಸಿರು ಮಾರ್ಗದ ಸಂಪೂರ್ಣ ವ್ಯಾಪ್ತಿಯಲ್ಲಿ ಸಾಮಾನ್ಯ (Revenue Service) ಮೆಟ್ರೋ ಸೇವೆಯನ್ನು ಪುನರಾರಂಭಿಸಲಾಗಿದೆ. ಸೇವೆಯಲ್ಲಿ ಉಂಟಾದ ತಾತ್ಕಾಲಿಕ ವ್ಯತ್ಯಯದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಬಿಎಂಆರ್ಸಿಎಲ್ ವಿಷಾದ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲ ಪ್ರಯಾಣಿಕರಿಗೆ ಧನ್ಯವಾದಗಳನ್ನು ತಿಳಿಸಿದೆ.

