ವಿಶ್ವವಿಖ್ಯಾತ ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್ ಕ್ಯಾಸಲ್‌ನಲ್ಲಿ ನಡೆದ ಪ್ರತಿಷ್ಠಿತ ‘ರಾಯಲ್ ಎಡಿನ್‌ಬರ್ಗ್ ಮಿಲಿಟರಿ ಟ್ಯಾಟೂ 2026’ ಸಮಾರಂಭದಲ್ಲಿ ಸಿಖ್ ಮೂಲದ ಕೆನಡಾ ಪೊಲೀಸ್ ಅಧಿಕಾರಿಯೊಬ್ಬರು ಐತಿಹಾಸಿಕ ಸಾಧನೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಕೆನಡಾದ ವ್ಯಾಂಕೋವರ್ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್ ಸುಖ್ವಿಂದರ್ ‘ಸುಕಿ’ ಸಿಂಗ್ ಸುಂಗರ್, ತಮ್ಮ ವ್ಯಾಂಕೋವರ್ ಪೊಲೀಸ್ ಪೈಪ್ ಬ್ಯಾಂಡ್‌ನ ಡ್ರಮ್ ಮೇಜರ್ ಆಗಿ ಎಡಿನ್‌ಬರ್ಗ್ ಕೋಟೆಯ ಮುಂಭಾಗದ ಎಸ್‌ಪ್ಲನೇಡ್‌ನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ಮೂಲಕ ಈ ಜಾಗತಿಕ ವೇದಿಕೆಯಲ್ಲಿ ಬ್ಯಾಂಡ್ ಅನ್ನು ಮುನ್ನಡೆಸಿದ ಪ್ರಪ್ರಥಮ ‘ಪೇಟಾಧಾರಿ ಸಿಖ್ ಡ್ರಮ್ ಮೇಜರ್’ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ಕಾಟಿಷ್ ಉಡುಪಿಗೆ ಸಿಖ್ ಪೇಟಾದ ಅದ್ಭುತ ಮೆರುಗು: ಸ್ಕಾಟ್ಲೆಂಡ್‌ನ ಸಾಂಪ್ರದಾಯಿಕ ಹೈಲ್ಯಾಂಡ್ ಉಡುಪಾದ ಚೆಕ್ ವಿನ್ಯಾಸದ ಟಾರ್ಟನ್ ಕಿಲ್ಟ್ (ಸ್ಕರ್ಟ್ ಮಾದರಿಯ ವಸ್ತ್ರ) ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಸುಖ್ವಿಂದರ್, ತಮ್ಮ ವಿಶಿಷ್ಟ ಶೈಲಿಯಿಂದ ನೋಡುಗರನ್ನು ಆಕರ್ಷಿಸಿದರು. ಸಾಂಪ್ರದಾಯಿಕವಾಗಿ ಧರಿಸುವ ಗರಿಗಳ ಟೋಪಿಯ (Feather bonnet) ಬದಲಾಗಿ, ಉಡುಪಿಗೆ ಸರಿಹೊಂದುವ ಚೆಕ್ ವಿನ್ಯಾಸದ ಸಿಖ್ ಪೇಟಾವನ್ನು (Turban) ಅವರು ಧರಿಸಿದ್ದರು. ಸ್ಕಾಟಿಷ್ ಮತ್ತು ಸಿಖ್ ಸಂಸ್ಕೃತಿಯ ಈ ಅಪರೂಪದ ಸಮ್ಮಿಶ್ರಣ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್: ಸುಖ್ವಿಂದರ್ ಸುಂಗರ್ ಅವರು ಬ್ಯಾಂಡ್ ಮುನ್ನಡೆಸುತ್ತಿರುವ ಚಿತ್ರವನ್ನು ‘ಎಕ್ಸ್’ (ಟ್ವಿಟರ್)ನಲ್ಲಿ ಹಂಚಿಕೊಳ್ಳಲಾಗಿದ್ದು, ಕ್ಷಣಾರ್ಧದಲ್ಲಿ ಭಾರಿ ವೈರಲ್ ಆಗಿದೆ. ಸುಂಗರ್ ಅವರ ಗಾಂಭೀರ್ಯ, ನಾಯಕತ್ವದ ಗುಣ ಹಾಗೂ ಸಿಖ್ ಸಂಸ್ಕೃತಿಯನ್ನು ಹೆಮ್ಮೆಯಿಂದ ಬಿಂಬಿಸಿದ ರೀತಿಗೆ ವಿಶ್ವದಾದ್ಯಂತ ನೆಟ್ಟಿಗರು ಪ್ರಶಂಸೆಯ ಸುರಿಮಳೆಗರೆದಿದ್ದಾರೆ. “ಅದ್ಭುತ ವ್ಯಕ್ತಿತ್ವ ಮತ್ತು ಅದ್ಭುತ ಲುಕ್”, “ವ್ಯಾಂಕೋವರ್ ಹಾಗೂ ಕೆನಡಾಕ್ಕೆ ನಿಜವಾದ ಹೆಮ್ಮೆ ತಂದಿದ್ದಾರೆ” ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಪ್ರತಿಷ್ಠಿತ ಮಿಲಿಟರಿ ಟ್ಯಾಟೂ: ಆಗಸ್ಟ್ 7 ರಿಂದ 29 ರವರೆಗೆ ‘ಎ ಕಾಲ್ ಟು ಗ್ಯಾದರ್’ (ಒಗ್ಗೂಡುವ ಕರೆ) ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಬಾರಿಯ ಎಡಿನ್‌ಬರ್ಗ್ ಮಿಲಿಟರಿ ಟ್ಯಾಟೂನಲ್ಲಿ ಜಗತ್ತಿನ ನಾನಾ ದೇಶಗಳ ಮಿಲಿಟರಿ ಬ್ಯಾಂಡ್‌ಗಳು, ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದವು. ವ್ಯಾಂಕೋವರ್ ಪೊಲೀಸ್ ಪೈಪ್ ಬ್ಯಾಂಡ್ ಈ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ಇದು ನಾಲ್ಕನೇ ಬಾರಿಯಾದರೂ, 2025ರ ಡಿಸೆಂಬರ್‌ನಲ್ಲಿ ಮೂರು ವರ್ಷಗಳ ಅವಧಿಗೆ ಡ್ರಮ್ ಮೇಜರ್ ಆಗಿ ಆಯ್ಕೆಯಾಗಿದ್ದ ಸುಖ್ವಿಂದರ್ ಸುಂಗರ್ ಅವರಿಗೆ ಇದು ಚೊಚ್ಚಲ ಪ್ರವೇಶವಾಗಿತ್ತು. ಮೊದಲ ಬಾರಿಗೆ ಭಾಗವಹಿಸಿದರೂ ತಮ್ಮ ಅನನ್ಯ ಸಂಸ್ಕೃತಿ ಮತ್ತು ವಿಶಿಷ್ಟ ಶೈಲಿಯಿಂದ ಈ ಜಾಗತಿಕ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಅವರು ಹೊರಹೊಮ್ಮಿದ್ದಾರೆ.

