ಮೈಸೂರು: ಜಿಎಸ್ ಟಿ ಕಡಿತ, ವಿಬಿ ಜಿ ರಾಮ್ ಜಿ ಯೋಜನೆ ಜಾರಿಯಂತಹ ಕ್ರಮಗಳಿಂದ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಕ್ಕೆ ಜಿಎಸ್ ಟಿ ಯಿಂದ ವಾರ್ಷಿಕವಾಗಿ 12 ರಿಂದ 15 ಸಾವಿರ ಕೋಟಿ ರೂ.ಗಳು ನಷ್ಟವಾಗುತ್ತಿದ್ದು, ಇದು ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಿಂದಲೂ ಮ ನರೇಗಾ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಅನುದಾನ ನೀಡುತ್ತಿತ್ತು. ಆದರೆ ಈಗ ಈ ಯೋಜನೆಯನ್ನು ರದ್ದುಪಡಿಸಿದ್ದು, ಇದರಿಂದ ಕಾರ್ಮಿಕರು, ಸನ್ಣರೈತರು,ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರಿಗೆ ನೀಡಲಾಗುತ್ತಿದ್ದ ಕೆಲಸದ ದಿನಗಳನ್ನು ಕಡಿಮೆಯಾಗಲಿದ್ದು, ಜನರ ಮೂಲಭೂತ ಹಕ್ಕಿಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದರು.
ಇದು ಅಸಂವಿಧಾನಿಕ ಕ್ರಮ. ಈ ಕಾಯ್ದೆಯಂತೆ ಕಾಮಗಾರಿಗಳಿಗೆ ಕೇಂದ್ರ ಮತ್ತು ರಾಜ್ಯ 60:40 ರಷ್ಟು ಅನುದಾನವನ್ನು ನೀಡಬೇಕಾಗಿದೆ. ಇದರಿಂದ ರಾಜ್ಯಸರ್ಕಾರದ ಮೇಲೆ ಸುಮಾರು 3000 ಕೋಟಿ ರೂ.ಗಳ ಹೊರೆ ಬೀಳಲಿದೆ ಎಂದರು.
ಇದೇ ವೇಳೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ, ನಾಳೆ ಅರಣ್ಯ ಇಲಾಖೆಯೊಂದಿಗೆ ಸಭೆ ನಿಗಧಿಯಾಗಿದೆ. ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಅರಣ್ಯಗಳಿಂದ ಜನರ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ. ಹುಲಿಯನ್ನು ಸೆರೆಹಿಡಿಯಲು ಸಿಬ್ಬಂದಿ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಸೆರೆಹಿಡಿದ ಹುಲಿಗಳನ್ನು ಮತ್ತೊಂದು ಅರಣ್ಯ ಪ್ರದೇಶಕ್ಕೆ ವರ್ಗಾಯಿಸಲು ಸೂಚಿಸಲಾಗಿದೆ ಎಂದರು.

