ಬೆಂಗಳೂರು: ಶಾಸಕರು, ಎಂಎಲ್ ಸಿಗಳು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರು ಬಹಿರಂಗವಾಗಿ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ಅಲಭ್ಯತೆ, ಅನುದಾನ ಕೊರತೆ, ಮತ್ತು ಅಧಿಕಾರಿಗಳಿಂದ ಕಿರುಕುಳದ ಕುರಿತು ಶಾಸಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು ನಗರದ ಶಾಂಗ್ರೀಲಾ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಂದು ರೀತಿಯ ಹೈಡ್ರಾಮಾ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವರು ಕೈಗೆ ಸಿಗುತ್ತಿಲ್ಲ, ಸಭೆಗಳಿಗೂ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ ಬಹಿರಂಗವಾಗಿ ಮಾತನಾಡುವುದಾಗಿಯೂ ಎಚ್ಚರಿಸಿದ್ದಾರೆ. ಮತ್ತೊಂದೆಡೆ ಪರಿಷತ್ ಸದಸ್ಯರು ಅನುದಾನಕ್ಕೆ ಬೇಡಿಕೆ ಕೂಡ ಇಟ್ಟಿದ್ದಾರೆ.
ಸಭೆಯಲ್ಲಿ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಹಾಗೂ ರಾಜೇಗೌಡ ನಡುವೆ ವಾಗ್ವಾದ ನಡೆಯಿತು, ಐಎ ಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ವಿರುದ್ಧ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಿಡಿ ಕಾರಿದ್ದು, ಪ್ರಭಾವಿಗಳ ಮಾತು ಕೇಳಿ ಕಿರುಕುಳ ಕೊಡುತ್ತಿದ್ದಾರೆ. ಪದೇಪದೆ ಟಾರ್ಗೆಟ್ ಮಾಡಿ ಭೂ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ನೋಟಿಸ್ ನೀಡುತ್ತಿದ್ದಾರೆ. ಇದೇ ರೀತಿ ಹತ್ತಾರು ಸಲ ನೋಟಿಸ್ ನೀಡಿದ್ದಾರೆ. ನೋಟಿಸ್‌ಗೆ ಉತ್ತರಿಸಿದರೂ ಕ್ಯಾರೆ ಅಂತಿಲ್ಲ ಎಂದು ಹೇಳುದರು.
ನಾನು ಮೂರು ಸಲ ಶಾಸಕನಾಗಿದ್ದೇನೆ, ನನಗೆ ಹೀಗಾದರೆ ಏನು ಮಾಡಲಿ? ಹೀಗಾಗಿ ಐಎಎಸ್ ಅಧಿಕಾರಿ ವಿರುದ್ಧ ಕ್ರಮ ಆಗಬೇಕು ಎಂದು ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಈ ವೇಳೆ ನಾರಾಯಣಸ್ವಾಮಿ ಮಾತಿಗೆ ಶೃಂಗೇರಿ ಶಾಸಕ ರಾಜೇಗೌಡ ಟಾಂಗ್ ನೀಡಿದ್ದು, ರಾಜೇಂದ್ರ ಕುಮಾರ್ ಕಟಾರಿಯಾ ಒಳ್ಳೆಯ ಅಧಿಕಾರಿ ಎಂದಿದ್ದಾರೆ. ರಾಜೇಗೌಡ ಮಾತಿಗೆ ಕೆರಳಿದ ನಾರಾಯಣಸ್ವಾಮಿ ನಿಮಗೇನ್ರಿ ಗೊತ್ತು? ನೋಟಿಸ್ ಕೊಟ್ಟಿರೋದು ನಿಮಗಾ? ಎಂದು ಪ್ರಶ್ನಿಸಿದರು.
ಇನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಜಿಲ್ಲೆಗಳಿಗೆ ಜಿಲ್ಲಾಧಿಕಾರಿ, ಎಸ್‌ಪಿಗಳನ್ನು ನೇಮಿಸುವ ಸಂಬಂಧ ಸೌಜನ್ಯಕ್ಕೂ ಶಾಸಕರ ಬಳಿ ಒಂದು ಮಾತು ಕೇಳಲ್ಲ. ಸಚಿವರು, ಪ್ರಭಾವಿಗಳ ಮಾತು ಕೇಳಿ ವರ್ಗಾವಣೆ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ನಾವು ಹೇಳಿದ ಕೆಲಸಗಳೇ ಆಗಲ್ಲ. ವಿಪಕ್ಷದವರ ಕೆಲಸಗಳನ್ನ ಡಿಸಿ, ಎಸ್‌ಪಿಗಳು ಮಾಡಿಕೊಡುತ್ತಾರೆ. ಹೀಗಾದರೆ ಕ್ಷೇತ್ರದಲ್ಲಿ ನಮ್ಮ ಮರ್ಯಾದೆ ಏನಾಗಬೇಡ ಎಂದು ಕೆಲ ಶಾಸಕರು ದೂರಿದ್ದಾರೆ.

