ಮುಖ್ಯಮಂತ್ರಿಯಾಗಿ ಹೊಸ ಇತಿಹಾಸ ನಿರ್ಮಾಣ ಮಾಡಲು ಸಿದ್ದರಾಮಯ್ಯ ತಯಾರಾಗಿದ್ದಾರೆ. ಜನವರಿ 6ರಂದು ಅವರು ರಾಜ್ಯದಲ್ಲಿ ಸುಧೀರ್ಘ ಅವಧಿ ಆಡಳಿತ ನಡೆಸಿದ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಅಭಿಮಾನಿಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಿದ್ದರಾಮಯ್ಯ 2013-2018ರ ತನಕ 1,829 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಮೇ 2023ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಸಿದ್ದರಾಮಯ್ಯ ಎರಡೂವರೆ ವರ್ಷ ಪೂರ್ಣಗೊಳಿಸಿದ್ದಾರೆ. ಈ ಮೂಲಕ 2,792 ದಿನಗಳ ಕಾಲ ಆಡಳಿತ ನಡೆಸಿದ ದಿ.ದೇವರಾಜ ಅರಸು ದಾಖಲೆಯನ್ನು ಮುರಿಯಲಿದ್ದಾರೆ.
ಆದ್ದರಿಂದ ಮಂಗಳವಾರ ಸಿದ್ದರಾಮಯ್ಯ ಅಭಿಮಾನಿಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರಲ್ಲಿ ಯುವ ಅಹಿಂದ ಒಕ್ಕೂಟ (ರಿ) ಕರ್ನಾಟಕ ಆಯೋಜನೆ ಮಾಡಿರುವ ನಾಟಿ ಕೋಳಿ ಔತಣಕೂಟ ಸೇರಿದೆ.
ಜನವರಿ 6ರ ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಹತ್ತಿರದ ಭಕ್ತನಪಾಳ್ಯದಲ್ಲಿ ಈ ಔತಣಕೂಟ ನಡೆಯಲಿದೆ. ಬನ್ನಿ ಸ್ನೇಹಿತರೆ ಪಕ್ಷಭೇದ ಮರೆತು ಆಚಾರ ವಿಚಾರ ಭೇದ ಮರೆತು ಅಹಿಂದ ಶಕ್ತಿಗಳೆಲ್ಲ ಒಂದಾಗಿ ಎಂದು ಕರೆ ನೀಡಲಾಗಿದೆ.
ದಿ. ದೇವರಾಜ ಅರಸು ಅವರು ಸತತವಾಗಿ ಏಳೂವರೆ ವರ್ಷ ಅಧಿಕಾರದಲ್ಲಿದ್ದರು. ಆದರೆ ಸಿದ್ದರಾಮಯ್ಯ 2013-2108ರ ತನಕ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಿದ್ದರು. ಬಳಿಕ 2018ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೊಂಡು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಸರ್ಕಾರ 14 ತಿಂಗಳಲ್ಲೇ ಪತನವಾಯಿತು. ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿತು ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದ ಕಾರಣ ಸಿದ್ದರಾಮಯ್ಯ 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ನವೆಂಬರ್ 20ಕ್ಕೆ ಎರಡೂವರೆ ವರ್ಷವನ್ನು ಪೂರ್ಣಗೊಳಿಸಿದ್ದಾರೆ.
7 ವರ್ಷ 239 ದಿನಗಳ ಕಾಲ ಡಿ. ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಜನವರಿ 5ರ ಸೋಮವಾರಕ್ಕೆ 7 ವರ್ಷ 239 ದಿನಗಳನ್ನು ಪೂರೈಸಿದ್ದಾರೆ. ಮಂಗಳವಾರ ಅವರು ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾದ ಸಾಧನೆ ಮಾಡಲಿದ್ದಾರೆ.
ಕರ್ನಾಟಕದಲ್ಲಿ ಅತಿ ಹೆಚ್ಚು ದಿನ ಆಡಳಿತ ನಡೆಸಿದ ಮುಖ್ಯಮಂತ್ರಿಗಳು
- ದಿ.ಡಿ.ದೇವರಾಜ ಅರಸು 7 ವರ್ಷ 239 ದಿನಗಳು
- ಸಿದ್ದರಾಮಯ್ಯ 7 ವರ್ಷ 239 ದಿನ (ಜನವರಿ 5, 2026ಕ್ಕೆ)
- ಎಸ್. ನಿಜಲಿಂಗಪ್ಪ 7 ವರ್ಷ 175 ದಿನಗಳು
- ರಾಮಕೃಷ್ಣ ಹೆಗಡೆ 5 ವರ್ಷ 216 ದಿನಗಳು
- ಬಿ.ಎಸ್.ಯಡಿಯೂರಪ್ಪ 5 ವರ್ಷ 82 ದಿನ (4 ಅವಧಿ ಸೇರಿಸಿ)
ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಸಿದ್ದರಾಮಯ್ಯ, “ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ. ಅರಸುರವರು ಮೈಸೂರಿನವರೇ ಆಗಿರುವುದು ಸಂತೋಷದ ಸಂಗತಿ. ತಾಲ್ಲೂಕು ಬೋರ್ಡ್ ಸದಸ್ಯನಾದ ನಂತರದ ನನ್ನ ರಾಜಕೀಯ ಜೀವನದಲ್ಲಿ ಸಚಿವನಾಗುವ ಮತ್ತು ಮುಖ್ಯಮಂತ್ರಿಯಾಗುವ ನಿರೀಕ್ಷೆಯಿರಲಿಲ್ಲ. 13 ಚುನಾವಣೆಗಳನ್ನೂ ಎದುರಿಸಿ 8ಕ್ಕೂ ಹೆಚ್ಚು ಬಾರಿ ಗೆಲುವು ಸಾಧಿಸಿದ್ದೇನೆ” ಎಂದರು.
“ಕಡಿಮೆ ಜನಸಂಖ್ಯೆಯ ಅರಸು ಸಮುದಾಯದವರಾಗಿದ್ದ ದೇವರಾಜ ಅರಸು ಅವರು ಜನಪ್ರಿಯ ನಾಯಕರಾಗಿದ್ದರು. ಅಂತಹ ಮಹಾನ್ ನಾಯಕನಿಗೂ ಮತ್ತು ನನಗೂ ಹೋಲಿಕೆ ಸರಿಯಲ್ಲ. ಅರಸು ಅವರ ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿತ್ತು. ಅವರು ಒಂದು ಬಾರಿ ಅವಿರೋಧವಾಗಿಯೂ ಆಯ್ಕೆಯಾಗಿದ್ದರು. ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಮುಂದೆ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು” ಎಂದು ಹೇಳಿದರು.

