ಬೆಂಗಳೂರು: ನನ್ನ ಮಾತು ಈಗಲೂ ನಡೆಯುತ್ತದೆ ಎಂದು ಬಹಳಷ್ಟು ಜನ ಅಂದುಕೊಂಡಿದ್ದಾರೆ. ಆದರೆ ನಾನೀಗ ಮುಖ್ಯಮಂತ್ರಿ ಅಲ್ಲ, ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಮಾತ್ರ ಗೊತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ಸಿಎಲ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನೀಗ ಮುಖ್ಯಮಂತ್ರಿ ಅಲ್ಲ. ನನ್ನ ಮಾತು ಈಗಲೂ ನಡೆಯುತ್ತೆ ಅಂತ ಬಹಳ ಜನ ಅನ್ಕೊಂಡಿದ್ದಾರೆ. ನಾನೂ ಹಾಗೇ ಅನ್ಕೊಂಡಿದ್ದೇನೆ. ಆದ್ರೆ ನನ್ನ ಮಾತು ಎಷ್ಟು ನಡೆಯುತ್ತೆ, ಎಷ್ಟು ನಡೆಯಲ್ಲ ಅಂತ ನನಗೆ ಮಾತ್ರ ಗೊತ್ತು ಎಂದರು.
ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಎರಡು ದಿನಗಳ ಹಿಂದೆ ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದರು. ಬಳಿಕ ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಎಐಸಿಸಿ ನಾಯಕರ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಈಗ ಸಿದ್ದರಾಮಯ್ಯ ಈ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಸದ್ಯದ ಸರ್ಕಾರದಲ್ಲಿ ತಮ್ಮ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ? ಅಂತ ನನಗೆ ಮಾತ್ರ ಗೊತ್ತಿದೆ ಎಂದು ಹೇಳುವ ಮೂಲಕ ತಮ್ಮ ಸಲಹೆಗಳಿಗೆ ಸರ್ಕಾರದಲ್ಲಿ ಮನ್ನಣೆ ಸಿಗುತ್ತಿಲ್ಲ ಎಂದು ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
ಇದೇ ವೇಳೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದ ವಿರೋಧಿಗಳಿಂದ ಸಂವಿಧಾನ ಶ್ರೇಷ್ಠವಾಗಲ್ಲ. ಸ್ವಾತಂತ್ರ್ಯ ಬಂದು 80 ವರ್ಷ ಆದರೂ ಸಂವಿಧಾನದ ಆಶಯ ಈಡೇರಿಲ್ಲ. ಪ್ರಜಾಪ್ರಭುತ್ವ ಧ್ವಂಸ ಮಾಡೋರ ಜೊತೆಗೆ ಹೋಗಬಾರದು, ಮನುವಾದಿಗಳಿಂದ ಬದಲಾವಣೆ ಆಗೋದಿಲ್ಲ. ಮನುವಾದಿಗಳ ಜೊತೆ ನೀವು ಹೋದರೆ ನಿಮಗೆ ಒಂದು ಸ್ಥಾನಮಾನ ಸಿಗಬಹುದು, ಆದ್ರೆ ಸಮಾಜದಲ್ಲಿ ಬದಲಾವಣೆಯಾಗುವುದಿಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ಜೀವಂತ ಇದೆ. ನಾವು ಶೂದ್ರ ವರ್ಗದ ಜನ, ಬದಲಾವಣೆಯ ದಾರಿಯಲ್ಲಿ ನಡೆಯಬೇಕು ಎಂದು ತಿಳಿಸುದರು.
ನರೇಂದ್ರ ಮೋದಿ ಪ್ರಧಾನಿಯಾಗಬೇಕಾದರೂದ್ರು ಸಂವಿಧಾನವೇ ಕಾರಣ. ಆದರೆ ಜಾತಿ ವ್ಯವಸ್ಥೆ ಬದಲಾವಣೆ ಆಗಬಾರದು ಅಂತ ಕೆಲವರು ಇದ್ದಾರೆ. ನಾನು 8 ವರ್ಷ ಸಿಎಂ ಆಗಿದ್ದಾಗ ಬದಲಾವಣೆಗೆ ಪ್ರಯತ್ನ ಪಟ್ಟೆ. SCSP-TSP ಕಾಯ್ದೆಯನ್ನ ಕೇಂದ್ರ ಸರ್ಕಾರ ಯಾಕೆ ಮಾಡಿಲ್ಲ? ಬಿಜೆಪಿಗೆ ವೋಟು ಕೊಟ್ಟು ಜನ ಕಳಿಸಿದ್ದಾರಲ್ಲಾ, ಬಹಳ ಜನ ಹುಡುಗರು ಮೋದಿ ಮೋದಿ ಅಂತಿದ್ರು, ಈಗ ಸೈಲೆಂಟ್ ಆಗಿದ್ದಾರೆ ಎಂದು ತಿರುಗೇಟು ನೀಡಿದರು.

