HomeKarnatakaಹರಿಹರ ಪಂಚಮಸಾಲಿ ಮಠದ ಟ್ರಸ್ಟ್ ನಿಂದ ಸರ್ಕಾರಿ ಅನುದಾನದಲ್ಲಿ 10 ಕೋಟಿ ರೂ.ದುರ್ಬಳಕೆ: ಲೆಕ್ಕಕೊಡಿ ಚಳುವಳಿ...

ಹರಿಹರ ಪಂಚಮಸಾಲಿ ಮಠದ ಟ್ರಸ್ಟ್ ನಿಂದ ಸರ್ಕಾರಿ ಅನುದಾನದಲ್ಲಿ 10 ಕೋಟಿ ರೂ.ದುರ್ಬಳಕೆ: ಲೆಕ್ಕಕೊಡಿ ಚಳುವಳಿ ಸಮಿತಿಯಿಂದ ಜಿಲ್ಲಾಧಿಕಾರಿಗೆ ದೂರು

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಮಠದ ಟ್ರಸ್ಟ್ ವಿರುದ್ಧ ಲೆಕ್ಕಕೊಡಿ ಚಳುವಳಿ ಸಮಿತಿ ಮತ್ತೊಂದು ಗಂಭೀರ ಆರೋಪ ಮಾಡಿದೆ. ಪಂಚಮಸಾಲಿ ಟ್ರಸ್ಟ್ ನಿಂದ 10 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದೆ.

ಈ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮಠದ ಲೆಕ್ಕಕೊಡಿ ಚಳುವಳಿ ಸಮಿತಿ ಮನವಿ ಸಲ್ಲಿಸಿದೆ. ಮಠಕ್ಕೆ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ‌ ಇಲಾಖೆಯಿಂದ 10 ಕೋಟಿ, ಪಂಚಾಯತ ರಾಜ್ ಇಲಾಖೆಯಿಂದ 3 ಕೋಟಿ ಸೇರಿದಂತೆ ವಿವಿಧ ಇಲಾಖೆಗಳಿಂದ ಒಟ್ಟು 16 ಕೋಟಿ ರೂಪಾಯಿ ಹಣ ಬಂದಿದೆ. ಆದರೆ ಆ ಪೈಕಿ 6 ಕೋಟಿ ರೂಪಾಯಿ ಕಾಮಗಾರಿ ಆಗಿದ್ದು, ಉಳಿದ 10 ಕೋಟಿ ಹಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದು ಸಮಿತಿ ದೂರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಮಗಾರಿ ಆಧಾರದ ಮೇಲೆ ಹಣ ಬಿಡುಗಡೆ ಮಾಡಬೇಕು. ಆದರೆ ಇಲ್ಲಿ ಯಾವುದೇವ್ ಕಟ್ಟಡ ಇಲ್ಲದಿದ್ದರೂ ಹಣ ಬಿಡುಗಡೆಯಾಗಿದೆ. ಕೇವಲ 44 ದಿನಗಳಲ್ಲಿ 10 ಕೋಟಿ ಹಣ ನೀಡಲಾಗಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ‌ ನೀಡಿ ಅನುದಾನ ಬಳಕೆ ಪ್ರಮಾಣ ಪತ್ರ ನೀಡಲಾಗಿದ್ದು, ಸರ್ಕಾರವು ಮಠಕ್ಕೆ ನೀಡಿದ್ದ ಅನುದಾನವನ್ನು ಕೆಲವು ಟ್ರಸ್ಟಿಗಳು ತಮ್ಮ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸಮಿತಿ ಆರೋಪಿಸಿದೆ.

ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ದುರ್ಬಳಕೆಯಾದ ಅನುದಾನವನ್ನು ದುರ್ಬಳಕೆ ಮಾಡಿಕೊಂಡವರಿಂದಲೇ ವಸೂಲಿ ಮಾಡಬೇಕು ಎಂದು ಆಗ್ರಹಿಸಿದೆ.

ಅನುದಾನ ಬಿಡುಗಡೆಗೆ ಸರ್ಕಾರ ವಿಧಿಸಿದ್ದ ಷರತ್ತು ಮತ್ತು ನಿಬಂಧನೆಗಳನ್ನು ಅಂದಿನ ಜಿಲ್ಲಾಧಿಕಾರಿ, ಹಿಂದುಳಿದವರ ಕಲ್ಯಾಣ ಇಲಾಖೆ ಅಧಿಕಾರಿಗಳು ಗಾಳಿಗೆ ತೂರಿ ಉಲ್ಲಂಘನೆ ಮಾಡಿದ್ದಾರೆ. ಕಟ್ಟಡ ಕಾಮಗಾರಿ ಮತ್ತು ಸ್ಥಳ ಪರಿಶೀಲನೆ ನಡೆಸದೇ ಮಠದ ಕೆಲವು ಟ್ರಸ್ಟಿಗಳೊಂದಿಗೆ ಶಾಮೀಲಾಗಿ, ಕಾಮಗಾರಿ ಪೂರ್ಣಗೊಳ್ಳದಿದ್ದರೂ ಕೇವಲ 44 ದಿನಗಳಲ್ಲಿ ಹಣ ಬಿಡುಗಡೆ ಮಾಡಿ ಸರ್ಕಾರದ ದುಡ್ಡನ್ನು ದುರುಪಯೋಗ ಮಾಡಿದ್ದಾರೆ ಎಂದು ಲೆಕ್ಕಕೊಡಿ ಚಳುವಳಿ ಸಮಿತಿ ಆರೋಪಿಸಿದೆ. ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯ ಜೊತೆಗೆ ಸಮಿತಿ ಕೆಲ ದಾಖಲೆಗಳ ಪ್ರತಿಗಳನ್ನು ಸಲ್ಲಿಸಿದೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಿದ್ದಾರೆ ಕಾದುನೋಡಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular