ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕರ್ನಾಟಕ ಕಾಂಗ್ರೆಸ್ 2 ಕ್ಷೇತ್ರದ ಉಪ ಚುನಾವಣೆ ತಯಾರಿ ಆರಂಭಿಸಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ನಡೆಯಬೇಕಿದೆ. ಕಾಂಗ್ರೆಸ್ ಶಾಸಕರ ನಿಧನದ ಕಾರಣ ಎರಡು ಕ್ಷೇತ್ರ ತೆರವಾಗಿದ್ದು, ಉಪ ಚುನಾವಣೆ ಗೆದ್ದು ಕ್ಷೇತ್ರ ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ.
ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಮತ್ತು ಹೆಚ್.ವೈ.ಮೇಟಿ ನಿಧನದ ಕಾರಣ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿಲ್ಲ. ಟಿಕೆಟ್‌ಗಾಗಿ ಭಾರೀ ಪೈಪೋಟಿ ಇದ್ದು, ಅಭ್ಯರ್ಥಿ ಅಂತಿಮಗೊಳಿಸುವುದು ಸವಾಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎರಡು ಕ್ಷೇತ್ರದ ಉಪ ಚುನಾವಣೆ ಬಗ್ಗೆ ಮಹತ್ವದ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಹ ಪಾಲ್ಗೊಂಡಿದ್ದರು.
ಸಭೆಯಲ್ಲಿ ಚುನಾವಣೆ ತಯಾರಿ, ಅಭ್ಯರ್ಥಿ ಆಯ್ಕೆಯ ಕುರಿತು ಚರ್ಚಿಸಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಚುನಾವಣಾ ಆಯೋಗ ಎರಡು ಕ್ಷೇತ್ರದ ಉಪ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ಯಾರು ಅಭ್ಯರ್ಥಿಗಳು?: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸುಮಾರು 45 ನಿಮಿಷಗಳ ಕಾಲ ಸಭೆಯನ್ನು ನಡೆಸಿದ್ದಾರೆ. ಎರಡು ಕ್ಷೇತ್ರದಲ್ಲಿ ಶಾಸಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬೇಕೆ? ಅಥವ ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆ? ಎಂದು ಚರ್ಚೆಗಳು ನಡೆದಿವೆ.
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಸಮರ್ಥ್ ಶಾಮನೂರು ತಂದೆ ಎಸ್.ಎಸ್.ಮಲ್ಲಿಕಾರ್ಜುನ ಸಿದ್ದರಾಮಯ್ಯ ಸಂಪುಟದಲ್ಲಿ ತೋಟಗಾರಿಕೆ ಸಚಿವರು, ತಾಯಿ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆ ಸಂಸದರು.
ಆದ್ದರಿಂದ ಅವರನ್ನು ಕಣಕ್ಕಿಳಿಸಿದರೆ ಪಕ್ಷದ ಇತರ ನಾಯಕರ ವಿರೋಧ ಎದುರಿಸಬೇಕಾಗಬಹುದು ಎಂದು ಚರ್ಚೆ ನಡೆಸಲಾಗಿದೆ. ಶಾಮನೂರು ಶಿವಶಂಕರಪ್ಪ ಕಿರಿಯ ಪುತ್ರ ಎಸ್.ಎಸ್.ಗಣೇಶ್ ಹೆಸರೂ ಕೂಡ ಅಭ್ಯರ್ಥಿಯಾಗಿ ಕೇಳಿಬಂದಿದೆ.
ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಜೋರಾಗಿದೆ. ಆದ್ದರಿಂದ ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಶಾಮನೂರು ಶಿವಶಂಕರಪ್ಪ ಕುಟುಂಬದ ನಿಲುವು ತಿಳಿದುಕೊಂಡು ಮುಂದಿನ ಹೆಜ್ಜೆ ಇಡಲು ಕಾಂಗ್ರೆಸ್ ತೀರ್ಮಾನಿಸಿದೆ.
ಬಾಗಲಕೋಟೆ ಕ್ಷೇತ್ರದ ಟಿಕೆಟ್ ವಿಚಾರದಲ್ಲಿಯೂ ಭಾರೀ ಪೈಪೋಟಿ ಇದೆ. ಹೆಚ್.ವೈ.ಮೇಟಿ ಪುತ್ರರಾದ ಮಲ್ಲಿಕಾರ್ಜುನ್ ಮತ್ತು ಉಮೇಶ್ ಹಾಗೂ ಪುತ್ರಿಯರಾದ ಮಾಜಿ ಜಿಪಂ ಅಧ್ಯಕ್ಷೆ ಬಯಕ್ಕ ಮೇಟಿ ಮತ್ತು ಮಹಾದೇವಿ ಮೇಟಿ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ.
ಬಾಗಲಕೋಟೆ ಉಪ ಚುನಾವಣೆ ಗೆಲ್ಲುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಸೂಚಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ.

