ಬೆಂಗಳೂರು-ವಿಧಾನಪರಿಷತ್ ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್ಡಿಎ ಸಾಧಿಸಿರುವ ಗೆಲುವು 2028 ರ ವಿಧಾನಸಭಾ ಚುನಾವಣೆಗೆ ಸ್ಪಷ್ಟ ಸಂದೇಶ ನೀಡಿದೆ. ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂಬ ವಿಶ್ವಾಸ ಮೂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಶಾಸಕರು, ಜಿಲ್ಲಾಧ್ಯಕ್ಷರು, ಮಾಜಿ ಕಾರ್ಪೊರೇಟರ್ಗಳು ಹಾಗೂ ಕಾರ್ಯಕರ್ತರು ಅತ್ಯುತ್ತಮ ಸಮನ್ವಯದಿಂದ ಕೆಲಸ ಮಾಡಿದ್ದಾರೆ. ಅಭ್ಯರ್ಥಿಯ ಆಯ್ಕೆಯಿಂದ ಹಿಡಿದು ಚುನಾವಣಾ ಪ್ರಚಾರದವರೆಗೂ ಎರಡೂ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಎನ್ಡಿಎ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದಾರೆ. ಇದೇ ಒಗ್ಗಟ್ಟು 2028ರ ವಿಧಾನಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂದರು.
ರಂಗನಾಥ್ ಅವರ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಬಳಿಕ ಜವಾಬ್ದಾರಿ ವಹಿಸಿಕೊಂಡು ವಿವಿಧ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿ, ಶಾಸಕರು ಹಾಗೂ ಮಾಜಿ ಕಾರ್ಪೊರೇಟರ್ಗಳೊಂದಿಗೆ ಸಮನ್ವಯ ಸಾಧಿಸಲಾಯಿತು. ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಕೆಲಸ ಮಾಡಿದ್ದರಿಂದ ಈ ಗೆಲುವು ಸಾಧ್ಯವಾಗಿದೆ ಎಂದು ತಿಳಿಸಿದರು.
2028ರ ಚುನಾವಣೆಗೆ ಸ್ಪಷ್ಟ ಸಂದೇಶ
*2028ರ ಚುನಾವಣೆಗೆ ಸ್ಪಷ್ಟ ಸಂದೇಶ*
ವಿಧಾನಪರಿಷತ್ ಚುನಾವಣೆಯ ಫಲಿತಾಂಶ ರಾಜ್ಯದ ಮತದಾರರ ಮನಸ್ಥಿತಿಯನ್ನು ಪ್ರತಿಬಿಂಬಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಈ ಫಲಿತಾಂಶವು ಮುಂಬರುವ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಹೇಳಿದರು.
ಪುಟ್ಟಣ್ಣ ಸೋಲು ಡಿ.ಕೆ.ಶಿವಕುಮಾರ್ಗೆ ಹಿನ್ನಡೆ
*ಪುಟ್ಟಣ್ಣ ಸೋಲು ಡಿ.ಕೆ.ಶಿವಕುಮಾರ್ಗೆ ಹಿನ್ನಡೆ*
ಹಲವು ಬಾರಿ ವಿವಿಧ ಪಕ್ಷಗಳಿಂದ ಗೆಲುವು ಸಾಧಿಸಿದ್ದ ಪುಟ್ಟಣ್ಣ ಈ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತರೆಂದು ಬಿಂಬಿಸಲಾಗಿತ್ತು. ಹೀಗಾಗಿ ಈ ಸೋಲು ಪುಟ್ಟಣ್ಣ ಅವರಿಗೆ ಮಾತ್ರವಲ್ಲದೆ, ಡಿ.ಕೆ.ಶಿವಕುಮಾರ್ ಅವರಿಗೂ ಹಿನ್ನಡೆಯಾಗಿದೆ. ಏಕೆಂದರೆ ಆ ಕ್ಷೇತ್ರದ ಹೊಣೆಯನ್ನು ಅವರೇ ವಹಿಸಿಕೊಂಡಿದ್ದರು ಎಂದು ಆರ್.ಅಶೋಕ ಟೀಕಿಸಿದರು.
ಬ್ಯಾಲೆಟ್ ಪೇಪರ್ನಲ್ಲೂ ಎನ್ಡಿಎಗೆ ಗೆಲುವು
*ಬ್ಯಾಲೆಟ್ ಪೇಪರ್ನಲ್ಲೂ ಎನ್ಡಿಎಗೆ ಗೆಲುವು*
ಚುನಾವಣೆಯಲ್ಲಿ ಸೋತಾಗ ಇವಿಎಂ ಬಗ್ಗೆ ಪ್ರಶ್ನೆ ಎತ್ತುವ ಕಾಂಗ್ರೆಸ್ ನಾಯಕರು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕೆಂದು ಒತ್ತಾಯಿಸುತ್ತಾರೆ. ಈಗ ವಿಧಾನಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದಿದ್ದು, ಅದರಲ್ಲೂ ಎನ್ಡಿಎ ಗೆಲುವು ಸಾಧಿಸಿದೆ. ಹೀಗಾಗಿ ಸೋಲಿಗೆ ಇವಿಎಂ ಕಾರಣವೆಂದು ಹೇಳುವ ಕಾಂಗ್ರೆಸ್ ನಾಯಕರಿಗೆ ಈ ಫಲಿತಾಂಶ ಸೂಕ್ತ ಉತ್ತರ ನೀಡಿದೆ, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹಾಗೂ ಆಂತರಿಕ ಸಂಘರ್ಷ ಹೆಚ್ಚಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವಿನ ಬೆಳವಣಿಗೆಗಳು, ಪಕ್ಷದ ನಾಯಕರ ಹೇಳಿಕೆಗಳು ಸರ್ಕಾರದೊಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ನಡೆದ ಚುನಾವಣೆಯಲ್ಲಿ ಜನರು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಅಧಿಕಾರದಲ್ಲಿರುತ್ತದೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ ಎಂದು ಟೀಕಿಸಿದರು.
ಕಾರ್ಯಕರ್ತರ ಪರಿಶ್ರಮಕ್ಕೆ ಅಭಿನಂದನೆ
*ಕಾರ್ಯಕರ್ತರ ಪರಿಶ್ರಮಕ್ಕೆ ಅಭಿನಂದನೆ*
ಈ ಚುನಾವಣೆಯಲ್ಲಿ ಹಗಲು-ರಾತ್ರಿ ಶ್ರಮಿಸಿದ ಬಿಜೆಪಿ ಮತ್ತು ಜೆಡಿಎಸ್ನ ಎಲ್ಲ ನಾಯಕರು, ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಮಾಜಿ ಕಾರ್ಪೊರೇಟರ್ಗಳು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಮಾರ್ಗದರ್ಶನವೂ ಈ ಗೆಲುವಿಗೆ ಸಹಕಾರಿಯಾಗಿದೆ. ಅವರ ಸಲಹೆಯಂತೆ ಬೆಂಗಳೂರು ವ್ಯಾಪ್ತಿಯಲ್ಲಿ ಮಾಜಿ ಕಾರ್ಪೊರೇಟರ್ಗಳನ್ನು ಸಂಪರ್ಕಿಸಿ, ಪ್ರತಿ ವಾರ್ಡ್ನಲ್ಲೂ ಸಂಘಟಿತ ಪ್ರಚಾರ ನಡೆಸಲಾಯಿತು. ಎಲ್ಲರ ಸಾಮೂಹಿಕ ಪರಿಶ್ರಮವೇ ಈ ಯಶಸ್ಸಿನ ಹಿಂದಿನ ಶಕ್ತಿಯಾಗಿದೆ ಎಂದರು.
ಬಿಜೆಪಿ–ಜೆಡಿಎಸ್ ಮೈತ್ರಿ ಮುಂದಿನ ದಿನಗಳಲ್ಲೂ ಇದೇ ಒಗ್ಗಟ್ಟು ಮತ್ತು ಸಮನ್ವಯದೊಂದಿಗೆ ಮುಂದುವರಿಯಲಿದ್ದು, 2028ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಆರ್.ಅಶೋಕ ಹೇಳಿದರು.

