ಕೋಲಾರ : ಮುಳಬಾಗಿಲಿನ ಆಲಂಗೂರು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಪತಿಯ ನಿಧನದ ದುಃಖ ತಾಳಲಾರದೆ ಇಬ್ಬರು ಕಂದಮ್ಮಗಳನ್ನು ಕತ್ತು ಹಿಸುಕಿ ಕೊಲೆಗೈದ ಘಟನೆ ನಡೆದಿದೆ.
ಘಟನೆಯ ವಿವರ ಮುಳಬಾಗಿಲು ತಾಲೂಕಿನ ಆಲಂಗೂರು ಗ್ರಾಮದಲ್ಲಿ ಆಂಧ್ರಪ್ರದೇಶ ಮೂಲದ ಬುಜ್ಜಮ್ಮ (22) ಎಂಬಾಕೆ ತನ್ನ ಇಬ್ಬರು ಮಕ್ಕಳಾದ ಸರಸ್ವತಿ (3) ಮತ್ತು ಹೇಮಾಶ್ರೀ (1) ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಬುಜ್ಜಮ್ಮ ಮತ್ತು ಆಕೆಯ ಪತಿ ಬಾಬು ಮೂಲತಃ ಆಂಧ್ರಪ್ರದೇಶದ ವಿನಾಯಕಪುರಂನವರಾಗಿದ್ದು, ಕಳೆದ ಒಂದು ವರ್ಷದಿಂದ ಆಲಂಗೂರಿನ ಮಾವಿನ ತೋಪಿನಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 20 ದಿನಗಳ ಹಿಂದೆ ಪತಿ ಬಾಬು ಅಪಘಾತದಲ್ಲಿ ಮೃತಪಟ್ಟಿದ್ದರು. ಪತಿಯ ಅಗಲಿಕೆಯಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬುಜ್ಜಮ್ಮ, ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಈ ವೇಳೆ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

