ಬೆಂಗಳೂರು: ರಾಜಧಾನಿ ಬೆಂಗಳೂರಿನ ತಲಘಟ್ಟಪುರದ ವಾಜರಹಳ್ಳಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಅವಳಿ ಹೆಣ್ಣು ಮಕ್ಕಳನ್ನು (ನಾಲ್ಕು ತಿಂಗಳ ಮಕ್ಕಳು) ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ ತಾಯಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಉಮಾದೇವಿ ಎಂಬ ಮಹಿಳೆ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮನೆಗೆ ಬಂದಿದ್ದ ಪತಿ ರಾಮಲಿಂಗಪ್ಪ ಅವರು ಪತ್ನಿಯನ್ನು ರಕ್ಷಿಸಿದ್ದಾರೆ. ಬಳಿಕ ಇಬ್ಬರು ಮಕ್ಕಳನ್ನು ಹಾಗೂ ಪತ್ನಿ ಉಮಾದೇವಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಕ್ಕಳು ಮೃತಪಟ್ಟಿವೆ, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
24 ವರ್ಷಗಳ ಬಳಿಕ ಐವಿಎಫ್ ಮೂಲಕ ಮಕ್ಕಳು
ರಾಮಲಿಂಗಪ್ಪ ಹಾಗೂ ಉಮಾದೇವಿ ಅವರು 2002ರಲ್ಲಿ ವಿವಾಹವಾಗಿದ್ದರು. ಮದುವೆಯಾಗಿ 24 ವರ್ಷಗಳಾದರೂ ಅವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ದಂಪತಿ ಐವಿಎಫ್ ಚಿಕಿತ್ಸೆಯ ಮೊರೆ ಹೋಗಿದ್ದರು.
ಕಳೆದ ಮೇ ತಿಂಗಳಲ್ಲಿ ಉಮಾದೇವಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಇದೀಗ ನಡೆದಿರುವ ಈ ದುರಂತ ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ತಲಘಟ್ಟಪುರ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

