ಕಠ್ಮಂಡು: ನೇಪಾಳದಲ್ಲಿ ಆ.26ರಂದು ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಪರಿಣಾಮ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸೆಪ್ಟೆಂಬರ್ 2ರ ವೇಳೆಗೆ ನೇಪಾಳದಲ್ಲಿ 1,127 ಮಂದಿ ಮೃತಪಟ್ಟಿದ್ದು, 4,858 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪ್ರವಾಹದ ಬಳಿಕ ನದಿಗಳ ಕೆಳಭಾಗದಲ್ಲಿ ಮೃತದೇಹಗಳು ಪತ್ತೆಯಾಗುತ್ತಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಹಿಮಾಲಯ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭಾರೀ ನೀರಿನ ಹರಿವು ಮತ್ತು ಪ್ರವಾಹದಿಂದ ನೇಪಾಳ–ಚೀನಾ ಗಡಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ರಸ್ತೆಗಳು, ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿದ್ದು, ಹಲವು ಪ್ರದೇಶಗಳು ಸಂಪರ್ಕ ಕಳೆದುಕೊಂಡಿವೆ.
ಸುರಂಗಗಳಲ್ಲಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯ
ವಿಶೇಷವಾಗಿ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಸಿಲುಕಿರುವವರನ್ನು ರಕ್ಷಿಸುವುದು ರಕ್ಷಣಾ ತಂಡಗಳಿಗೆ ದೊಡ್ಡ ಸವಾಲಾಗಿದೆ. ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾದ ಪರಿಣತ ತಂಡಗಳು ನೇಪಾಳ ಸೇನೆಯೊಂದಿಗೆ ಸೇರಿ ಸುರಂಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಪ್ರವಾಹದಿಂದ ಸಾವಿರಾರು ಜನರು ಮನೆ-ಮಠ ಕಳೆದುಕೊಂಡಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳು ಮುಂದುವರಿದಿವೆ. ಆದರೆ ಪ್ರತಿಕೂಲ ಹವಾಮಾನ, ಹಾನಿಗೊಳಗಾದ ರಸ್ತೆಗಳು ಹಾಗೂ ಅಪಾಯಕಾರಿ ಭೂಪ್ರದೇಶದಿಂದ ರಕ್ಷಣಾ ಕಾರ್ಯಾಚರಣೆಗಳು ಕಷ್ಟಕರವಾಗಿವೆ.
ಮೃತದೇಹಗಳ ಗುರುತು ಪತ್ತೆಗೂ ಸವಾಲು: ಅಪಾರ ಸಂಖ್ಯೆಯಲ್ಲಿ ಮೃತದೇಹಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರಿಂದ ಡಿಎನ್‌ಎ ಮಾದರಿ ಮತ್ತು ಛಾಯಾಚಿತ್ರಗಳನ್ನು ಪಡೆದು ಗುರುತು ಪತ್ತೆಹಚ್ಚುವ ಪ್ರಕ್ರಿಯೆಯನ್ನೂ ಅಧಿಕಾರಿಗಳು ಕೈಗೊಂಡಿದ್ದಾರೆ.
ನೇಪಾಳ, ನೀವು ಒಂಟಿಯಲ್ಲ: ಪ್ರವಾಹ ಪೀಡಿತ ದೇಶಕ್ಕೆ ಧಾವಿಸಿದ ಸೋನು ಸೂದ್
ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಬಾಲಿವುಡ್ ನಟ ಹಾಗೂ ಸಮಾಜ ಸೇವಕ ಸೋನು ಸೂದ್ ಧಾವಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಅವರು, ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವಂತೆ ವಿಶ್ವದಾದ್ಯಂತದ ಜನರಿಗೆ ಮನವಿ ಮಾಡಿದ್ದಾರೆ.
ಪ್ರವಾಹದಿಂದ ಉಂಟಾಗಿರುವ ಭೀಕರ ನಾಶವನ್ನು ಸ್ಥಳದಲ್ಲೇ ಕಂಡ ಸೋನು ಸೂದ್, ಹಲವು ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಂಡಿದ್ದು, ತಕ್ಷಣದ ನೆರವಿನ ಅಗತ್ಯವಿದೆ ಎಂದು ಹೇಳಿದ್ದಾರೆ.
“ಈ ಸಂಪೂರ್ಣ ಪರಿಸ್ಥಿತಿಯನ್ನು ನೋಡಿದಾಗ ಪ್ರವಾಹದ ಪರಿಣಾಮ ಎಷ್ಟು ಭೀಕರವಾಗಿದೆ ಎಂಬುದು ಅರ್ಥವಾಗುತ್ತದೆ. ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಅವರು ಯಾವ ರೀತಿಯ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದನ್ನು ಊಹಿಸಬಹುದು. ಎಲ್ಲರೂ ಮುಂದೆ ಬಂದು ಸಹಾಯ ಮಾಡಬೇಕು. ಜಗತ್ತಿನ ಎಲ್ಲೆಡೆಯಿರುವ ಜನರು ತಮ್ಮ ಕೈಲಾದ ನೆರವು ನೀಡಬೇಕು. ಈ ಜನರ ಪರವಾಗಿ ನಿಲ್ಲುವುದು ಬಹಳ ಮುಖ್ಯ. ನೇಪಾಳವನ್ನು ಮತ್ತೆ ತನ್ನ ಕಾಲ ಮೇಲೆ ನಿಲ್ಲಿಸಲು ನಾವೆಲ್ಲರೂ ಸಹಕರಿಸಬೇಕು” ಎಂದು ಸೋನು ಸೂದ್ ಹೇಳಿದ್ದಾರೆ.
ಫ್ಲ್ಯಾಶ್ ಫ್ಲಡ್‌ನಿಂದ ಧ್ವಂಸಗೊಂಡ ಪ್ರದೇಶಗಳನ್ನು ತೋರಿಸಿದ ಅವರು, “ಈಗಲೂ ನೀರಿನ ಹರಿವು ಎಷ್ಟು ಪ್ರಬಲವಾಗಿತ್ತು ಎಂಬುದನ್ನು ನೋಡಬಹುದು. ಆ ಸಮಯದಲ್ಲಿ ನೀರು ಬಹಳ ದೂರದವರೆಗೂ ಹರಿದು ಹೋಗಿತ್ತು. ಈಗ ಜನರು ಅವಶೇಷಗಳಿಂದ ಕೂಡಿದ ಪ್ರದೇಶಗಳನ್ನು ತಲುಪಿದ್ದಾರೆ. ಇದು ನಿಜಕ್ಕೂ ದುಃಖಕರ” ಎಂದು ಹೇಳಿದ್ದಾರೆ.
ನೆಲಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವ ಸೋನು ಸೂದ್, ಪ್ರವಾಹ ಪೀಡಿತರಿಗೆ ನೆರವು ತಲುಪಿಸುವ ನಿಟ್ಟಿನಲ್ಲಿ ತಮ್ಮ ತಂಡವು ಹಲವು ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದೆ. ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅಗತ್ಯ ನೆರವನ್ನು ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ನೇಪಾಳದಲ್ಲಿ ಸ್ಥಳೀಯರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿದ ಸೋನು ಸೂದ್, ಅಲ್ಲಿನ ಪರಿಸ್ಥಿತಿಯ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.“ಅವರು ತಮ್ಮ ಮನೆಗಳನ್ನು, ಕುಟುಂಬದವರನ್ನು, ತಮ್ಮ ಬಾಲ್ಯವನ್ನೂ ಕಳೆದುಕೊಂಡಿದ್ದಾರೆ. ಆದರೆ ನಾವೆಲ್ಲರೂ ಒಟ್ಟಾಗಿ ಅವರಿಗೆ ಹೊಸ ಆರಂಭವನ್ನು ನೀಡಲು ಸಹಾಯ ಮಾಡುತ್ತೇವೆ. ನೇಪಾಳ, ನೀವು ಒಂಟಿಯಲ್ಲ” ಎಂದು ಅವರು ಹೇಳಿದ್ದಾರೆ.

