ಬೆಂಗಳೂರು: ಸಚಿವ ಶಿವರಾಜ್ ತಂಗಡಗಿ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಕೊಪ್ಪಳದಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕಾರು ಚಾಲಕ ಮತ್ತು ಗನ್ ಮ್ಯಾನ್ ನೆರವಿನಿಂದ ಅವರನ್ನು ತುಮಕೂರು ನಗರದ ಬಿ.ಹೆಚ್ ರಸ್ತೆಯಲ್ಲಿರುವ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ.
ಅನಾರೋಗ್ಯದ ವಿಚಾರವಾಗಿ ಸ್ವತಃ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದು, ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮವಿದ್ದ ಕಾರಣ ನಾಲ್ಕು ದಿನಗಳ ಹಿಂದೆ ನನ್ನ ಕನಕಗಿರಿ ಮತಕ್ಷೇತ್ರಕ್ಕೆ ಹೋಗಿದ್ದೆ. ಕಾರ್ಯಕ್ರಮ ಮುಗಿಸಿಕೊಂಡು ಕೊಪ್ಪಳದಿಂದ ಬೆಂಗಳೂರಿಗೆ ಹೊರಟು ಬರುವಾಗ ಭಾನುವಾರ ರಾತ್ರಿ ಮಾರ್ಗ ಮಧ್ಯೆ ಎದೆ ಚುಚ್ಚಿದ ಅನುಭವ ಆಯಿತು. ಈ ಹಿನ್ನೆಲೆಯಲ್ಲಿ ನನ್ನ ಕುಟುಂಬದ ವೈದ್ಯರೊಂದಿಗೆ ಕರೆ ಮಾಡಿ ಮಾತನಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಒಮ್ಮೆ ತಪಾಸಣೆ ಮಾಡಿಸುವಂತೆ ಸೂಚಿಸಿದರು. ಹೀಗಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿದೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಈ ರೀತಿ ಆಗಿದೆ. ಯಾರು ಆತಂಕಪಡುವ ಅಗತ್ಯವಿಲ್ಲ. ನಾನು ಸೋಮವಾರ ಬೆಳಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಎಂದಿನಂತೆ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.
ಯಾರು ಕೂಡ ವದಂತಿಯನ್ನು ಹಬ್ಬಿಸುವುದು ಬೇಡ. ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿದ್ದೇನೆ ಅಷ್ಟೇ. ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

