ಶಿವಮೊಗ್ಗ: ಕಾನ್ಸ್ ಟೇಬಲ್ ಕಿರುಕುಳ, ಅಪಪ್ರಾಚರಕ್ಕೆ ಮನನೊಂದು ವಿಧವೆ ಆತ್ಮಹತ್ಯೆಗೆ ಶರಣಾಗಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿ ಕಾನ್ಸ್ ಟೇಬಲ್ ಮೋಹನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕಾನ್‌ಸ್ಟೆಬಲ್ ಮೋಹನ್ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಆಕೆಗೆ ನಿರಂತರ ತೊಂದರೆ ನೀಡಿದ್ದ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಿಳೆಯ ಪತಿ ಕೂಡ ವಾರದ ಹಿಂದೆ ಅನಾರೋಗ್ಯಕ್ಕೆ ಬಲಿಯಾಗಿದ್ದರು. ಈಗ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.
ಮೃತ ಮಹಿಳೆಯ ತಾಯಿ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಮೋಹನ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಕಾನ್ಸ್‌ಟೇಬಲ್ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಫೇಸ್‌ಬುಕ್ ಹಾಗೂ ಮೆಸೇಂಜರ್ ಮೂಲಕ ತನ್ನ ಮಗಳಿಗೆ ನಿರಂತರವಾಗಿ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಬ್ಲಾಕ್ ಮಾಡಿದರೂ ಬೇರೆ ಖಾತೆಗಳಿಂದ ಸಂಪರ್ಕಿಸುತ್ತಿದ್ದ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ. ಪೊಲೀಸನ ಕಿರುಕುಳಕ್ಕೆ ನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಾಯಿ ಉಲ್ಲೇಖಿಸಿದ್ದಾರೆ. ಅಲ್ಲದೇ ಮಗಳಿಗೆ ಬೆದರಿಕೆಯನ್ನೂ ಹಾಕಿದ್ದ ಎಂದು ಆರೋಪಿಸಿದ್ದಾರೆ.
ಇನ್ನು ಆರೋಪಿ ಕಾನ್ಸ್‌ಟೇಬಲ್ ಮೋಹನ್ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಹಾಗೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿ ಮೋಹನ್ ವಿರುದ್ಧ ಹಲವು ಆರೋಪಗಳಿವೆ. ಮೋಹನ್ ಈ ಹಿಂದೆ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಅಶಿಸ್ತು ಹಿನ್ನೆಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಠಾಣೆಗೆ ವರ್ಗಾವಣೆಗೊಂಡಿದ್ದನಂತೆ. ಸಾಮಾಜಿಕ ಜಾಲತಾಣಗಳ ಮೂಲಕ ಇನ್ನೂ ಹಲವು ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪಗಳೂ ಕೇಳಿಬಂದಿವೆ. ಅಲ್ಲದೇ ನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದನೆಂಬ ದೂರುಗಳೂ ಕೂಡ ಈತನ ವಿರುದ್ಧ ದಾಖಲಾಗಿವೆ.
ಘಟನೆಯ ಹಿನ್ನಲೆ:
ಶಿವಮೊಗ್ಗ: ರಕ್ಷಣೆ ನೀಡಬೇಕಾದ ಪೊಲೀಸಪ್ಪನೇ ಮಹಿಳೆಯ ಬಗ್ಗೆ ಅಪಪ್ರಚಾರ ಮಾಡಿದ್ದು, ನೊಂದ ವಿಧವೆ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸನ ಕಾಟಕ್ಕೆ ಬೇಸತ್ತ ವಿಧವೆ ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ. ಶಿವಮೊಗ್ಗದ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸ್ವಾತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ಕರ್ತವ್ಯ ನಿರ್ವಹಿಸುವ ಮೋಹನ್ ಹೆಸರು ಬರೆದಿಟ್ಟು ಸ್ವಾತಿ ಸಾವಿಗೆ ಶರಣಾಗಿದ್ದಾರೆ.
ಸ್ವಾತಿ ಹಾಗೂ ಜಗದೀಶ್ ಮದುವೆಯಾಗಿ 7 ವರ್ಷವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಾರದ ಹಿಂದಷ್ಟೇ ಸ್ವಾತಿ ಪತಿ ಜಗದೀಶ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಪೊಲೀಸ್ ಮೋಹನ್, ಸ್ವಾತಿಗೆ ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿ ಕಾಟಕೊಡಲಾರಂಭಿಸಿದ್ದ. ಆತನ ಅಕೌಂಟ್ ನ್ನು ಸ್ವಾತಿ ಬ್ಲಾಕ್ ಮಾಡಿದ್ದರು. ಇದಕ್ಕೆ ಕೋಪಗೊಂಡ ಪೋಲಿಸ್ ಬೇರೆ ಅಕೌಂಟ್ ನಿಂದ ಸ್ವಾತಿ ಬಗ್ಗೆ ಅಪಪ್ರಚಾರ ಮಾಡಲಾರಂಭಿಸಿದ್ದ. ಪೊಲೀಸ್ ಸಿಬ್ಬಂದಿಯಾಗಿರುವ ಮೋಹನ್ ವರ್ತನೆಯಿಂದ ಬೇಸತ್ತ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಾವಿಗೂ ಮುನ್ನ ಸ್ವಾತಿ ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಸಾರಿ ಅಮ್ಮ. ನನ್ನ ಬಗ್ಗೆ ಇಲ್ಲ ಸಲ್ಲದ ವಿಚಾರವನ್ನು ಕೆಟ್ಟದಾಗಿ ಜನಗಳ ಹತ್ತಿರ ಮೋಹನ್ ಹೇಳಿದ್ದಾರೆ. ಇದರಿಂದ ತುಂಬಾ ಮನನೊಂದಿದ್ದೇನೆ. ಈಗಾಗಲೇ ಪತಿಯನ್ನು ಕಳೆದುಕೊಂಡಿದ್ದೇನೆ. ಈ ಮೋಹನ್ ಎನ್ನುವ ಪೊಲೀಸ್ ನನ್ನ ಬಗ್ಗೆ ಕೆಟ್ಟದಾಗಿ ಜನರ ಬಳಿ ಏನೇನೋ ಹೇಳಿರುವುದು ನನಗೆ ಈಗ ಬೆಳಿಗ್ಗೆ ವಿಷಯ ಗೊತ್ತಾಯಿತು. ಅವನನ್ನು ಮಾತ್ರ ಸಮ್ಮನೇ ಬಿಡಬೇಡಿ ಎಂದು ಬರೆದಿಟ್ಟಿದ್ದಾರೆ.
ಆತ ಯಾರು ಅಂತಾನೆ ನಂಗೆ ಗೊತ್ತಿರಲಿಲ್ಲ. ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿದ್ದರು. ನಾನು ಬ್ಲಾಕ್ ಮಾಡಿದೆ. ಅದೇ ಸಿಟ್ಟಿಗೆ ಏನೇನೋ ಹೇಳಿದ್ದಾರೆ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ದಯವಿಟ್ಟು ಕ್ಷಮಿಸಿ ಅಮ್ಮ ಎಂದು ಸ್ವಾತಿ ಡೆತ್ ನೋಟ್ ಬರೆದಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದರು.

