ತೂಕ ಇಳಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಎಷ್ಟೇ ಕಷ್ಟಪಟ್ಟು ವ್ಯಾಯಾಮ ಮಾಡಿದರೂ ಫಲಿತಾಂಶ ಸಿಗದಿದ್ದಾಗ ನಾವು ಸಾಮಾನ್ಯವಾಗಿ ಜೀರಿಗೆ ನೀರು ಅಥವಾ ಕಷಾಯಗಳ ಮೊರೆ ಹೋಗುತ್ತೇವೆ. ಆದರೆ ಆಯುರ್ವೇದದಲ್ಲಿ ‘ಅಮೃತಬಳ್ಳಿ’ ಅಥವಾ ಗಿಲೋಯ್‌ಗೆ ವಿಶೇಷ ಸ್ಥಾನವಿದೆ. ಕೇವಲ ತೂಕ ಇಳಿಸುವುದಷ್ಟೇ ಅಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕಾಂಡ ಮತ್ತು ಬೇರುಗಳು ಔಷಧೀಯ ಗುಣಗಳ ಗಣಿಯಾಗಿವೆ.
ಅಮೃತಬಳ್ಳಿಯನ್ನು ಆಹಾರದಲ್ಲಿ ಸೇರಿಸಲು 5 ಪ್ರಮುಖ ಕಾರಣಗಳು:
- ತೂಕ ಇಳಿಕೆಗೆ ಸಹಕಾರಿ: ಅಮೃತಬಳ್ಳಿಯಲ್ಲಿರುವ ‘ಅಡಿಪೋನೆಕ್ಟಿನ್’ ಮತ್ತು ‘ಲೆಪ್ಟಿನ್’ ಎಂಬ ಪೋಷಕಾಂಶಗಳು ದೇಹದ ಹಾರ್ಮೋನುಗಳ ಕಾರ್ಯವೈಖರಿಯನ್ನು ನಿಯಂತ್ರಿಸುತ್ತವೆ. ಇದು ದೇಹದಲ್ಲಿರುವ ಅನಗತ್ಯ ನೀರು ಮತ್ತು ಟಾಕ್ಸಿನ್ಸ್‌ಗಳನ್ನು ಹೊರಹಾಕುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸಿ, ತೂಕ ಇಳಿಸಲು ಸಹಾಯ ಮಾಡುತ್ತದೆ.
- ರೋಗನಿರೋಧಕ ಶಕ್ತಿ ಹೆಚ್ಚಳ: ಇದೊಂದು ಆ್ಯಂಟಿ-ಆಕ್ಸಿಡೆಂಟ್‌ಗಳ ಪವರ್‌ಹೌಸ್. ಇದು ದೇಹದ ಜೀವಕೋಶಗಳನ್ನು ಆರೋಗ್ಯವಾಗಿಟ್ಟು, ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ರಕ್ತವನ್ನು ಶುದ್ಧೀಕರಿಸುವುದಲ್ಲದೆ ಯಕೃತ್ತು (Liver) ಮತ್ತು ಮೂತ್ರನಾಳದ ಸೋಂಕುಗಳ ಚಿಕಿತ್ಸೆಯಲ್ಲಿ ಇದು ಸಹಕಾರಿ.
- ರಕ್ತದ ಸಕ್ಕರೆ ಮಟ್ಟದ ನಿಯಂತ್ರಣ: ಮಧುಮೇಹ ಹೊಂದಿರುವವರಿಗೆ ಅಮೃತಬಳ್ಳಿ ಒಂದು ನೈಸರ್ಗಿಕ ಮದ್ದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ (ವಿಶೇಷವಾಗಿ ಟೈಪ್ 2 ಡಯಾಬಿಟಿಸ್). ಆದರೆ ಇದನ್ನು ಬಳಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.
- ಜೀರ್ಣಕ್ರಿಯೆ ಸುಧಾರಣೆ: ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಅಮೃತಬಳ್ಳಿ ಉತ್ತಮ ಮನೆಮದ್ದು. ನೆಲ್ಲಿಕಾಯಿ ರಸದೊಂದಿಗೆ (Amla Juice) ಅಮೃತಬಳ್ಳಿ ರಸವನ್ನು ಬೆರೆಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
- ಒತ್ತಡ ನಿವಾರಣೆ: ಇಂದಿನ ಒತ್ತಡದ ಜೀವನದಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಇದು ಸಹಾಯ ಮಾಡುತ್ತದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಕಾರಿಯಾಗಿದೆ.
ಬಳಸುವ ವಿಧಾನ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಪ್ರಮಾಣದ ಅಮೃತಬಳ್ಳಿ ರಸವನ್ನು ಕುಡಿಯುವುದರಿಂದ ತೂಕ ಇಳಿಕೆಗೆ ವೇಗ ಸಿಗುತ್ತದೆ. 3-4 ಚಮಚ ಅಮೃತಬಳ್ಳಿ ರಸವನ್ನು ಲೋಳೆಸರ (Aloe Vera) ರಸ ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.

