ಬೆಂಗಳೂರು: ಕರ್ನಾಟಕದ ಬೆಳಗಾವಿ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸುಮಾರು 35 ಸಾವಿರ ಜನರಿಗೆ ₹2,165 ಕೋಟಿ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಶಿವಂ ಅಸೋಸಿಯೇಟ್ಸ್ ಪ್ರಕರಣದಲ್ಲಿ ಶಿವಾನಂದ ನೀಲಣ್ಣನವರ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಆರೋಪಪಟ್ಟಿ ಸಲ್ಲಿಸಿದೆ.
ಈ ಪ್ರಕರಣವು ದೊಡ್ಡ ಪ್ರಮಾಣದ ಹಣಕಾಸು ವಂಚನೆ ಆರೋಪವಾಗಿದ್ದು, ಹೂಡಿಕೆದಾರರು ಮತ್ತು ಹಣ ಕಳೆದುಕೊಂಡಿರಬಹುದಾದ ಜನರಲ್ಲಿ ಆತಂಕ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣನವರ್ ಅವರನ್ನು ಸುಮಾರು ಎರಡು ತಿಂಗಳ ಹಿಂದೆ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಆರೋಪಪಟ್ಟಿ ಸಲ್ಲಿಕೆಯಾಗಿರುವುದು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಪ್ರಕರಣದ ಹಿನ್ನೆಲೆ
ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಹೆಚ್ಚಿನ ಬಡ್ಡಿ ನೀಡುವ ಭರವಸೆ ನೀಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದೆ ಎಂಬ ಆರೋಪ ಕೇಳಿಬಂದಿದೆ. ಹೂಡಿಕೆದಾರರಿಗೆ ತಿಂಗಳಿಗೆ ಶೇ. 3ರಷ್ಟು ಬಡ್ಡಿ ನೀಡುವುದಾಗಿ ಆಮಿಷವೊಡ್ಡಲಾಗಿತ್ತು ಎನ್ನಲಾಗಿದೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಶಿವಾನಂದ ನೀಲಣ್ಣನವರ್ ಅವರನ್ನು ಮೇ ತಿಂಗಳಲ್ಲಿ ಪೊಲೀಸರು ಬಂಧಿಸಿದ್ದರು. ಪ್ರಕರಣವನ್ನು ಬಳಿಕ ಸಿಐಡಿ ತನಿಖೆಗೆ ವಹಿಸಲಾಗಿತ್ತು.
ಇ.ಡಿ. ಅಧಿಕಾರಿಗಳ ದಾಳಿ
ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಪ್ರದೇಶಗಳಲ್ಲಿನ ಶಿವಂ ಅಸೋಸಿಯೇಟ್ಸ್ ಹಾಗೂ ಸಂಬಂಧಿತ ವ್ಯಕ್ತಿಗಳ ಸ್ಥಳಗಳಲ್ಲಿ ಶೋಧ ನಡೆಸಿ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಯಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಶಿವಾನಂದ ನೀಲಣ್ಣನವರ್ ಅವರನ್ನು ಇ.ಡಿ. ಬಂಧಿಸಿತು. ವಿಶೇಷ ನ್ಯಾಯಾಲಯವು ಅವರನ್ನು 12 ದಿನಗಳ ಕಾಲ ಇ.ಡಿ. ವಶಕ್ಕೆ ನೀಡಿತ್ತು.
ವಂಚನೆ ಆರೋಪ
ಶಿವಂ ಅಸೋಸಿಯೇಟ್ಸ್ ಸುಮಾರು ₹2,110.97 ಕೋಟಿ ಸಂಗ್ರಹಿಸಿತ್ತು. ಅದರಲ್ಲಿ ಸುಮಾರು ₹333.89 ಕೋಟಿ ಮರುಪಾವತಿಯಾಗಿರುವುದನ್ನು ಗುರುತಿಸಲಾಗಿದ್ದು, ಸುಮಾರು ₹1,777.08 ಕೋಟಿ ಹಣದ ಪತ್ತೆ ಇನ್ನೂ ಬಾಕಿ ಇದೆ ಎಂದು ಹೇಳಲಾಗಿದೆ.
ಸಂಗ್ರಹಿಸಿದ ಹಣವು ವಿವಿಧ ಬ್ಯಾಂಕ್ ಖಾತೆಗಳು, ವೈಯಕ್ತಿಕ ಖಾತೆಗಳು, ಮಧ್ಯವರ್ತಿಗಳ ಖಾತೆಗಳು, ಷೇರು ಮಾರುಕಟ್ಟೆ ಹೂಡಿಕೆಗಳು ಮತ್ತು ನಿಶ್ಚಿತ ಠೇವಣಿಗಳ ಮೂಲಕ ವರ್ಗಾವಣೆಯಾಗಿರುವ ಬಗ್ಗೆ ಪರಿಶೀಲನೆ ನಡೆದಿದೆ. ಸಂಬಂಧಿತ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಆರ್ಥಿಕ ವ್ಯವಹಾರಗಳನ್ನೂ ತನಿಖೆ ನಡೆಸಲಾಗುತ್ತಿದೆ.
ಈ ಪ್ರಕರಣದಲ್ಲಿ ಹಣ ಕಳೆದುಕೊಂಡಿರುವವರು ತಮ್ಮ ಹಣ ಮರಳಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ
ಮಡಿಕೇರಿ: ಮಡಿಕೇರಿ ದಸರಾ-2026ರ ಅಂಗವಾಗಿ ದಸರಾ ಸಾಂಸ್ಕೃತಿಕ ಸಮಿತಿಯ ವತಿಯಿಂದ ಅಕ್ಟೋಬರ್ 11 ರಿಂದ 21 ರವರೆಗೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ನಗರದ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಕಾಫಿ ದಸರಾ, ಕವಿಗೋಷ್ಠಿ, ಮಕ್ಕಳ ದಸರಾ, ಜನಪದ ದಸರಾ, ಯುವ ದಸರಾ ಹಾಗೂ ಮಹಿಳಾ ದಸರಾ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೆಳೆಯಲಿವೆ.
ಅಕ್ಟೋಬರ್, 11 ರಂದು ಸಂಜೆ 5.30ಕ್ಕೆ ಪಂಪಿನ ಕೆರೆಯಲ್ಲಿ ಕರಗ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಅಕ್ಟೋಬರ್ 12, ರಂದು ಸಂಜೆ 6.30ಕ್ಕೆ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 13 ರಂದು ಬೆಳಗ್ಗೆ ಕಾಫಿ ದಸರಾ ಉದ್ಘಾಟನೆ ನಡೆಯಲಿದ್ದು, ಸಂಜೆ 4 ಗಂಟೆಗೆ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 14 ರಂದು ಬೆಳಗ್ಗೆ 10 ಗಂಟೆಗೆ ಕಾಫಿ ದಸರಾ ಮೇಳ ಆರಂಭವಾಗಲಿದ್ದು, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 15 ರಂದು ಬೆಳಗ್ಗೆ 10 ಗಂಟೆಗೆ ಕವಿಗೋಷ್ಠಿ ಹಾಗೂ ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 16 ರಂದು ಬೆಳಗ್ಗೆ 9 ಗಂಟೆಗೆ ಮಕ್ಕಳ ದಸರಾ ಸ್ಪರ್ಧೆಗಳು ಹಾಗೂ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 17 ರಂದು ಬೆಳಗ್ಗೆ 10 ಗಂಟೆಗೆ ಶ್ವಾನ ಪ್ರದರ್ಶನ (ಡಾಗ್ ಶೋ) ಹಾಗೂ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 18 ರಂದು ಬೆಳಗ್ಗೆ 10 ಗಂಟೆಗೆ ಜನಪದ ದಸರಾ ಹಾಗೂ ಸಂಜೆ 6.30ಕ್ಕೆ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಕ್ಟೋಬರ್ 19 ರಂದು ಬೆಳಗ್ಗೆ 10 ಗಂಟೆಗೆ ಮಹಿಳಾ ದಸರಾ ಹಾಗೂ ಸಂಜೆ 6.30ಕ್ಕೆ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್, 20 ರಂದು ಆಯುಧ ಪೂಜೆಯ ಅಂಗವಾಗಿ ಸಂಜೆ 6 ಗಂಟೆಯಿಂದ ಗಾಂಧಿ ಮೈದಾನದಲ್ಲಿ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್, 21 ರಂದು ವಿಜಯ ದಶಮಿಯಂದು ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ದಸರಾ ಮಂಟಪಗಳ ಆಕರ್ಷಕ ಶೋಭಾಯಾತ್ರೆ ಸಾಗಲಿದೆ.
ಅಕ್ಟೋಬರ್, 22 ರಂದು ಬೆಳಗ್ಗೆ 6 ಗಂಟೆಗೆ ಅತಿಥಿಗಳಿಂದ ವಿಜೇತ ದಸರಾ ಮಂಟಪಗಳಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ.

