‘ಶಕ್ತಿ’ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆ. ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವ ಯೋಜನೆ ಇದಾಗಿದೆ. ಆದರೆ ಇದರಿಂದಾಗಿ ಸಾರಿಗೆ ನಿಗಮಗಳ ‘ಶಕ್ತಿ’ ಕುಂದಿಸಿದ ಕಾಂಗ್ರೆಸ್ ಸರ್ಕಾರದ ಫ್ರೀ ಟಿಕೆಟ್ ಎಂದು ಬಿಜೆಪಿ ಆರೋಪಿಸಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯ ಕಾರಣ ಸಾರಿಗೆ ನಿಗಮಗಳು ಹೇಗೆ ನಷ್ಟಕ್ಕೆ ಸಿಲುಕಿವೆ? ಎಂದು ಅಂಕಿ ಸಂಖ್ಯೆಗಳ ಲೆಕ್ಕ ನೀಡಿದ್ದಾರೆ.
ಪೋಸ್ಟ್ ವಿವರ: ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಸಾರಿಗೆ ನಿಗಮಗಳ ಕುತ್ತಿಗೆ ಹಿಸುಕುತ್ತಿದೆ! “ಉಚಿತ” ಎನ್ನುವ ಬಣ್ಣದ ಮಾತುಗಳ ಹಿಂದೆ ಅಡಗಿರುವುದು ಸಾರಿಗೆ ಸಂಸ್ಥೆಗಳ “ವಿನಾಶದ ಕಥೆ”.
ರಾಜ್ಯದ ಜನತೆಗೆ ‘ಉಚಿತ’ದ ಆಮಿಷವೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಆಹುತಿ ಪಡೆಯಲು ಹೊರಟಿದೆ. “ಶಕ್ತಿ” ಯೋಜನೆಯ ಅಬ್ಬರದ ಪ್ರಚಾರದ ನಡುವೆ, ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಹಳ್ಳ ಹಿಡಿಯುತ್ತಿರುವುದು ಕಾಂಗ್ರೆಸ್ ಸರ್ಕಾರದ ಸ್ವಯಂಕೃತ ಅಪರಾಧಕ್ಕೆ ಹಿಡಿದ ಕೈಗನ್ನಡಿ.
ಕಳೆದ ಮೂರು ಆರ್ಥಿಕ ವರ್ಷಗಳಿಂದ ಸರ್ಕಾರ ನಿಗಮಗಳಿಗೆ ಪಾವತಿಸಬೇಕಾದ ಶಕ್ತಿ ಯೋಜನೆಯ ಬಾಕಿ ಮೊತ್ತ ಬೆಟ್ಟದಂತೆ ಬೆಳೆದಿದೆ; ಬೆಳೆಯುತ್ತಲೂ ಇದೆ! ಎಂದು ಹೇಳಿದ್ದಾರೆ.
- 2023-24: ರೂ. 1,180.62 ಕೋಟಿ.
- 2024-25: ರೂ. 1,170.46 ಕೋಟಿ.
- 2025-26: ರೂ. 1,869.56 ಕೋಟಿ.
- ಒಟ್ಟು ಬಾಕಿ: ರೂ. 4,220.63 ಕೋಟಿ.
ಇಷ್ಟು ದೊಡ್ಡ ಮೊತ್ತದ ಹಣವನ್ನು ಪಾವತಿಸಲು ಆರ್ಥಿಕ ಇಲಾಖೆ ಈಗ ನೇರವಾಗಿ ‘ನೋ’ ಎಂದಿದೆ! ಅಂದರೆ, ಸಾರಿಗೆ ಸಂಸ್ಥೆಗಳು ನಷ್ಟದಲ್ಲಿ ಮುಳುಗಲಿ, ನೌಕರರ ಸಂಬಳ ನಿಲ್ಲಲಿ, ಬಸ್‌ಗಳು ಹಳ್ಳ ಹಿಡಿಯಲಿ – ನಮಗೆ ಮಾತ್ರ ಪ್ರಚಾರ ಸಿಗಲಿ ಎಂಬುದು ಕಾಂಗ್ರೆಸ್ ಸರ್ಕಾರದ ಸಿದ್ಧಾಂತವಾಗಿದೆ.
ಸಾರಿಗೆ ನಿಗಮಗಳ ಬಾಕಿ ಪಾವತಿಯನ್ನು ಆರ್ಥಿಕ ಇಲಾಖೆಯು “ಹೆಚ್ಚುವರಿ ಅನುದಾನ ನೀಡಲು ಸಾಧ್ಯವಿಲ್ಲ” ಎಂದು ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಸಂಸ್ಥೆಗಳ ಪಾಲಿಗೆ “ಮರಣಶಾಸನ” ಬರೆದಂತಿದೆ. ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ, ವಾಸ್ತವದಲ್ಲಿ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ ಮಾಡದೆ ವಂಚಿಸಿ, ರಾಜ್ಯದ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿರುವ ನಾಲ್ಕು ಸಾರಿಗೆ ನಿಗಮಗಳನ್ನು (KSRTC, BMTC, NWKRTC, KKRTC) ತನ್ನ ‘ಗ್ಯಾರಂಟಿ’ ರಾಜಕೀಯಕ್ಕೆ ಬಲಿಪಶು ಮಾಡಿದೆ.
ಕಾಂಗ್ರೆಸ್ ಸರ್ಕಾರಕ್ಕೆ ನನ್ನ ಪ್ರಶ್ನೆಗಳು
- ಸಂಸ್ಥೆಗಳ ನಷ್ಟಕ್ಕೆ ಹೊಣೆ ಯಾರು? ಹಳೆಯ ಬಸ್‌ಗಳ ನವೀಕರಣವಿಲ್ಲದೆ, ಬಿಡಿಭಾಗಗಳ ಖರೀದಿಗೆ ಹಣವಿಲ್ಲದೆ, ನೌಕರರ ವೇತನಕ್ಕೆ ಸಂಚಕಾರ ತಂದಿರುವ ಈ ನಷ್ಟಕ್ಕೆ ನೇರವಾಗಿ “ಶಕ್ತಿ” ಯೋಜನೆಯ ಅವೈಜ್ಞಾನಿಕ ಅನುಷ್ಠಾನವೇ ಕಾರಣವಲ್ಲವೇ?
- ರಾಜಕೀಯ ಲಾಭಕ್ಕೆ ಸಂಸ್ಥೆಗಳ ಬಲಿ ಏಕೆ? ಚುನಾವಣಾ ಲಾಭಕ್ಕಾಗಿ ಉಚಿತ ಟಿಕೆಟ್ ಘೋಷಿಸಿದ ನೀವು, ಈಗ ಆ ಹೊರೆಯನ್ನು ಹೊರುವ ಶಕ್ತಿ ಇಲ್ಲದೆ ಕೈಚೆಲ್ಲಿ ಕುಳಿತಿರುವುದು ನಿಮ್ಮ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಲ್ಲವೇ?
- ನೌಕರರ ಭವಿಷ್ಯವೇನು? ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿದರೆ, ಅಲ್ಲಿ ಕಾರ್ಯನಿರ್ವಹಿಸುವ ಲಕ್ಷಾಂತರ ನೌಕರರ ಮತ್ತು ಅವರ ಕುಟುಂಬಗಳ ಗತಿಯೇನು?
- ಬಾಕಿ ಪಾವತಿಗೆ ತೆಗೆದುಕೊಂಡಿರುವ ಕ್ರಮವೇನು? 4,220 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ಪಾವತಿಸಲು ಸರ್ಕಾರ ಹಾಕಿಕೊಂಡಿರುವ ಯೋಜನೆಯಾದರೂ ಏನು?
ಒಂದು ಕಡೆ ಜನರಿಗೆ ‘ಉಚಿತ’ದ ಆಸೆ ತೋರಿಸಿ, ಇನ್ನೊಂದೆಡೆ ತೆರಿಗೆದಾರರ ಹಣವನ್ನು ಸರಿಯಾಗಿ ಪಾವತಿಸದೆ ಸಾರ್ವಜನಿಕ ಆಸ್ತಿಯನ್ನು ನಾಶ ಮಾಡುತ್ತಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ನಡೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಹಾಗೂ ಈ ಕೂಡಲೇ “ಶಕ್ತಿ ಯೋಜನೆ”ಯ ಬಾಕಿ ಇರುವ ರೂ 4,220.63 ಕೋಟಿ ಹಣವನ್ನು ಸಾರಿಗೆ ಸಂಸ್ಥೆಗಳಿಗೆ ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ. ಸಾರಿಗೆ ಉಳಿಸಿ, ಸಂಸ್ಥೆಗಳನ್ನು ರಕ್ಷಿಸಿ! ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

