ಮಂಗಳೂರು: ಶಬರಿಮಲೆ ಯಾತ್ರೆಗೆ ತೆರಳಿದ್ದ ದಕ್ಷಿಣ ಕನ್ನಡ ಮೂಲದ ವ್ಯಕ್ತಿಯೊಬ್ಬರು ರೈಲಿನಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.
ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ವಸಂತ ಪೂಜಾರಿ (60) ಎಂದು ಗುರುತಿಸಲಾಗಿದೆ. ಶಬರಿಮಲೆ ಯಾತ್ರೆಗಾಗಿ ಮಂಗಳೂರಿನಿಂದ ಕೇರಳಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಾಳು ವಸಂತ್ ಅವರನ್ನು ಕೇರಳದ ತ್ರಿಶೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ರವಾನಿಸಲಾಗಿದೆ.

