ಶಿವಮೊಗ್ಗ : ಎರಡನೇ ವಿವಾಹವಾಗಿ ವಂಚನೆ ಮಾಡುವುದು ಕೇವಲ ನೈತಿಕವಾಗಿ ತಪ್ಪು ಮಾತ್ರವಲ್ಲ, ಭಾರತೀಯ ಕಾನೂನಿನ ಪ್ರಕಾರ ಇದು ಗಂಭೀರವಾದ ಅಪರಾಧವಾಗಿದೆ. ಹಿಂದೂ ವಿವಾಹ ಕಾಯ್ದೆಯಡಿ ಮೊದಲ ಹೆಂಡತಿ/ಗಂಡ ಜೀವಂತವಾಗಿರುವಾಗ ಮತ್ತು ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಏನಿದು ಘಟನೆ
ತೀರ್ಥಹಳ್ಳಿ ತಾಲ್ಲೂಕಿನ ಮಹಮ್ಮದ್ ಮುತಿಬ್, 32 ವರ್ಷ ಇಂದಿರಾ ನಗರ ಸುರಳ್ಳಿ ಬಾಳೆಬೈಲ್ ಈತನು ಈ ಹಿಂದೆಯೇ ಮದುವೆಯಾಗಿ ಮಗಳು ಇದ್ದರೂ ಸಹಾ, ತನಗೆ ಇನ್ನೂ ಮದುವೆ ಆಗಿಲ್ಲ ಎನ್ನುವ ಸುಳ್ಳು ದಾಖಲಾತಿ ನೀಡಿ ಬೇರೊಬ್ಬ ಯುವತಿಯನ್ನು ಶಿವಮೊಗ್ಗ ದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಎರಡನೇ ಮದುವೆ ಆಗಿರುತ್ತಾನೆ. ಎಂದು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಠಾಣೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ : 0001/2021ರ ಕಲಂ 494, 420 ಸಹಿತ 34 ಐಪಿಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ. ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀಮತಿ ಶಾಂತಲಾ ಮಹಿಳಾ ಠಾಣೆ ಪಿ.ಎಸ್.ಐ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಕಾರಾವಾಸ ಶಿಕ್ಷೆ ಮತ್ತು ರೂ 5000/- ದಂಡ
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಕಿರಣಕುಮಾರ್ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಮಾನ್ಯ ಜಿಲ್ಲಾ 2ನೇ ಜೆ ಎಮ್ ಎಫ್ ಸಿ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿ ಮಹಮ್ಮದ್ ಮುತಿಬ್ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಸಿದ್ದರಾಜು ಏನ್ ಕೆ ರವರು ಆರೋಪಿಗೆ 03 ವರ್ಷ ಸಾದಾ ಕಾರಾವಾಸ ಶಿಕ್ಷೆ ಮತ್ತು ರೂ 5000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 30 ದಿನಗಳ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

