ಅಮೆರಿಕದಲ್ಲಿ ಬಂದೂಕು ಸಂಸ್ಕೃತಿಯ ಅಟ್ಟಹಾಸ ಮುಂದುವರಿದಿದ್ದು, ವಾಷಿಂಗ್ಟನ್ ರಾಜ್ಯದ ಸಿಯಾಟಲ್ ನಗರದಲ್ಲಿ ನಡೆದ ಪ್ರಸಿದ್ಧ ಆಹಾರ ಉತ್ಸವದಲ್ಲಿ ಸಂಭವಿಸಿದ ಸಾಮೂಹಿಕ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಗರದ ಪ್ರಖ್ಯಾತ ಪ್ರವಾಸಿ ತಾಣ ಸ್ಪೇಸ್ ನೀಡಲ್ ಸಮೀಪದ ಸಿಯಾಟಲ್ ಸೆಂಟರ್‌ನಲ್ಲಿ ಭಾನುವಾರ ಸಂಜೆ (ಸ್ಥಳೀಯ ಕಾಲಮಾನ) ಈ ಭೀಕರ ದುರಂತ ಸಂಭವಿಸಿದೆ.
ವಾರ್ಷಿಕವಾಗಿ ನಡೆಯುವ ಪ್ರಸಿದ್ಧ ಬೈಟ್ ಆಫ್ ಸಿಯಾಟಲ್ ಆಹಾರ ಮೇಳದಲ್ಲಿ ನೂರಾರು ಆಹಾರ ಮಳಿಗೆಗಳು, ಪ್ರವಾಸಿಗರು ಹಾಗೂ ಲೈವ್ ಸಂಗೀತ ಕಾರ್ಯಕ್ರಮಗಳಿಂದ ವಾತಾವರಣ ಕಳೆಗಟ್ಟಿತ್ತು. ಈ ವೇಳೆ ಸಂಜೆ ಸುಮಾರು 6 ಗಂಟೆಗೆ ಏಕಾಏಕಿ 7 ರಿಂದ 8 ಸುತ್ತು ಗುಂಡಿನ ಸದ್ದು ಕೇಳಿಬಂದಿದೆ. ಆತಂಕಗೊಂಡ ನೂರಾರು ಸಾರ್ವಜನಿಕರು ಪ್ರಾಣಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದ್ದು, ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿ ಪರಿಸ್ಥಿತಿ ಗೊಂದಲಮಯವಾಯಿತು.
ಘಟನೆ ನಡೆದ ತಕ್ಷಣವೇ ಪೊಲೀಸರು ಹಾಗೂ ತುರ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದವು. ಗಾಯಾಳುಗಳನ್ನು ಸಮೀಪದ ಹಾರ್ಬರ್‌ವ್ಯೂ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಗುಂಡಿನ ಸದ್ದು ಕೇಳಿಸುತ್ತಿದ್ದಂತೆ ಜನ ದಿಕ್ಕಾಪಾಲಾಗಿ ಓಡುತ್ತಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಈ ಕುರಿತು ಪೊಲೀಸ್ ಇಲಾಖೆಯಿಂದ ಇನ್ನೂ ಅಧಿಕೃತ ದೃಢೀಕರಣ ಸಿಕ್ಕಿಲ್ಲ.
ಸಿಯಾಟಲ್ ಪೊಲೀಸ್ ಇಲಾಖೆಯು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಘಟನೆಗೆ ಸಂಬಂಧಿಸಿ ಕಾರ್ಯಾಚರಣೆ ಮುಂದುವರಿದಿದ್ದು, ಸಾರ್ವಜನಿಕರು ಈ ಪ್ರದೇಶಕ್ಕೆ ತೆರಳದಂತೆ” ಸೂಚನೆ ನೀಡಿದೆ. ಭದ್ರತೆ ಕಾರಣದಿಂದ ಸುತ್ತಮುತ್ತಲಿನ ಮಳಿಗೆಗಳನ್ನು ಖಾಲಿ ಮಾಡಿಸಲಾಗಿದೆ.
ಬೈಟ್ ಆಫ್ ಸಿಯಾಟಲ್ ಹಾಗೂ ಬಂದೂಕು ಸಂಸ್ಕೃತಿ:
1982ರಲ್ಲಿ ಆರಂಭವಾದ ಬೈಟ್ ಆಫ್ ಸಿಯಾಟಲ್’ ಅಮೆರಿಕದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಆಹಾರ ಮೇಳಗಳಲ್ಲಿ ಒಂದಾಗಿದೆ. ಪ್ರತಿ ವರ್ಷ 3 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಸುಮಾರು 3.5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ.
ಗನ್ ವೈಯಲೆನ್ಸ್ ಆರ್ಕೈವ್ ವರದಿ ಪ್ರಕಾರ ಅಮೆರಿಕದಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಮಾಸ್ ಶೂಟಿಂಗ್‌ಗಳು ತೀವ್ರ ಕಳವಳ ಮೂಡಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ಬಂದೂಕು ಬಳಕೆಗೆ ಕಟ್ಟುನಿಟ್ಟಿನ ನಿಷೇಧ ಹೇರಬೇಕು ಮತ್ತು ಕಾಯ್ದೆಗಳನ್ನು ಬಿಗಿಗೊಳಿಸಬೇಕು ಎಂದು ಯುಎಸ್ ಸರ್ಕಾರದ ಮೇಲೆ ಸಾರ್ವಜನಿಕರ ಒತ್ತಡ ಹೆಚ್ಚಾಗುತ್ತಿದೆ.

