HomeKarnatakaಕಾಡುಹಂದಿ ಬೇಟೆಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು: ಗುಟ್ಟಾಗಿ ಶವ ಹೂತು ಹಾಕಿದ್ದ...

ಕಾಡುಹಂದಿ ಬೇಟೆಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು: ಗುಟ್ಟಾಗಿ ಶವ ಹೂತು ಹಾಕಿದ್ದ ಮೂವರು ಆರೋಪಿಗಳು ಅರೆಸ್ಟ್

ಚಿಕ್ಕಮಗಳೂರು: ಕಾಡುಹಂದಿ ಶಿಕಾರಿಗೆಂದು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ದೊಣ್ಣೆಕೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪುತ್ತಿದ್ದಂತೆ ವಿಷಯ ಮುಚ್ಚಿ ಹಾಕಲು ಆರೋಪಿಗಳು ಶವವನ್ನು ಗುಟ್ಟಾಗಿ ಹೂತುಹಾಕಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಯಗಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಕಡೂರು ತಾಲೂಕಿನ ದೊಣ್ಣೆಕೋರನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕರಿಯಪ್ಪ (55) ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ವ್ಯಕ್ತಿ. ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ಚಂದ್ರಪ್ಪ, ಕೆಂಚಪ್ಪ ಮತ್ತು ಯದುಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೊಣ್ಣೆಕೋರನಹಳ್ಳಿ ಗ್ರಾಮದ ಬಳಿ ಆರೋಪಿಗಳು ಕಾಡುಹಂದಿ ಬೇಟೆಯಾಡಲು ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದರು. ಈ ವೇಳೆ ಅಲ್ಲಿಗೆ ಹೋಗಿದ್ದ ಕರಿಯಪ್ಪ ಅವರು ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಿಂದ ಗಾಬರಿಗೊಂಡ ಆರೋಪಿಗಳು, ಪ್ರಕರಣದಿಂದ ನುಣುಚಿಕೊಳ್ಳಲು ಯಾರಿಗೂಗೊತ್ತಾಗದಂತೆ ಕರಿಯಪ್ಪ ಅವರ ಶವವನ್ನು ಗುಟ್ಟಾಗಿ ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ.

ಇತ್ತ ಕರಿಯಪ್ಪ ಅವರು ಮನೆಗೆ ವಾಪಸ್ ಬಾರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಸುಳಿವು ಸಿಗದಿದ್ದಾಗ ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದ ಬೆನ್ನತ್ತಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸುದೀರ್ಘವಾಗಿ ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪ್ರಕರಣದ ಗಂಭೀರತೆ ತಿಳಿದ ಗ್ರಾಮಸ್ಥರು ಯಗಟಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಸದ್ಯ ಯಗಟಿ ಠಾಣೆ ಪೊಲೀಸರು ಮೂವರನ್ನೂ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular