ಬೆಂಗಳೂರು: ರಾಜ್ಯದಲ್ಲಿ ಯುವ ಜನತೆಯಲ್ಲಿ ಹೆಚ್ಐವಿ ಸೋಂಕು ಹೆಚ್ಚುತ್ತಿದೆ. ಹೆಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಆರಂಭಿಕ ಹಂತದಲ್ಲೇ ಸೋಂಕು ಪತ್ತೆಹಚ್ಚಿ, ಕಡಿವಾಣ ಹಾಕುಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ನಿರ್ಧಾರಿಸಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಹಾಗೂ ಇತರ ಸಂಸ್ಥೆಗಳ ವರದಿಗಳ ಪ್ರಕಾರ, ಹೆಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 2.60 ಲಕ್ಷ ಮಂದಿ ಹೆಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿದ್ದು, ಅವರಲ್ಲಿ ಸುಮಾರು 2.05 ಲಕ್ಷ ಮಂದಿ ಆಂಟಿ ರೆಟ್ರೋ ವೈರಲ್ ಥೆರಪಿ (ART) ಪಡೆಯುತ್ತಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ವಿಶೇಷವಾಗಿ 18 ರಿಂದ 35 ವರ್ಷದ ಯುವ ಸಮೂಹದಲ್ಲಿ ಸೋಂಕು ವೇಗವಾಗಿ ಹರಡುತ್ತಿರುವುದು ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. ಇದೇ ವಯೋಮಾನದೊಳಗಿನ 18 ರಿಂದ 25 ವರ್ಷದ ಸುಮಾರು 7 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಸುಮಾರು 54 ಸಾವಿರ ಮಂದಿಗೆ ತಮಗೆ ಸೋಂಕು ಇರುವುದೇ ತಿಳಿದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ಹಿನ್ನೆಲೆ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸುವ ಯೋಜನೆಯನ್ನು ಆರೋಗ್ಯ ಇಲಾಖೆ ರೂಪಿಸಿದೆ. ಈ ವಿಶೇಷ ಅಭಿಯಾನಕ್ಕೆ ಆಯಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಸಹಕರಿಸುವಂತೆ ಆರೋಗ್ಯ ಇಲಾಖೆ ಮುಖ್ಯಸ್ಥರು ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳ ಗೌಪ್ಯತೆ ಕಾಪಾಡುವ ಉದ್ದೇಶದಿಂದ ʻನಿಮ್ಮ ಹೆಚ್‌ಐವಿ ಸ್ಥಿತಿ ತಿಳಿದುಕೊಳ್ಳಿʼ ಎಂಬ QR ಕೋಡ್ ಆಧಾರಿತ ಸ್ವಯಂ ಅಪಾಯ ಮೌಲ್ಯಮಾಪನ (Self Risk Assessment) ವ್ಯವಸ್ಥೆಯನ್ನೂ ಪರಿಚಯಿಸಲಾಗುತ್ತಿದೆ. ಇದರ ಮೂಲಕ ವಿದ್ಯಾರ್ಥಿಗಳು ತಮ್ಮ ಹೆಚ್‌ಐವಿ ಅಪಾಯದ ಮಟ್ಟವನ್ನು ಗೌಪ್ಯವಾಗಿ ಮತ್ತು ಸುಲಭವಾಗಿ ಪರಿಶೀಲಿಸಿಕೊಳ್ಳಲು ಅವಕಾಶ ದೊರೆಯಲಿದೆ. ಒಟ್ಟಾರೆ ಆರೋಗ್ಯ ಇಲಾಖೆ ಹೆಚ್ಐವಿ ಸೋಂಕನ್ನು ಆರಂಭದಲ್ಲೇ ಪತ್ತೆ ಮಾಡಿ ಯುವ ಜನತೆಗೆ ಚಿಕಿತ್ಸೆ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.

