ವಿಜಯನಗರ: ರಾಜ್ಯದಲ್ಲಿ ಇಂದು ಸಾಲು ಸಾಲು ಬೆಂಕಿ ಅವಘಡ ಸಂಭವಿಸಿರುವ ವರದಿಯಾಗಿದೆ. ಶಾಲೆಯಲ್ಲಿ ಬಿಸಿಯೂಟ ತಯಾರಿಸುವಾಗ ಸಿಲಿಂದರ್ ಸೋರಿಕೆಯಾಗಿ ಅಡುಗೆ ಕೊಟ್ಟಡಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡತಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಆತಂಕಕ್ಕೀಡಾಗಿದ್ದಾರೆ. ಸಿಲಿಂದರ್ ಸೋರಿಕೆಯಾಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ವಿದ್ಯಾರ್ಥಿಗಳು, ಶಿಕ್ಷಕರು ಶಾಲೆಯಿಂದ ಹೊರಗೋಡಿ ಬಂದು ರಕ್ಷಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡದ ಬಗ್ಗೆ ತಿಳಿಯುತ್ತಿದ್ದಂತೆ ಶಾಲೆಯತ್ತ ದೌಡಾಯಿಸಿದ ಗ್ರಾಮಸ್ಥರು ಶಾಲೆಯ ಸಿಬ್ಬಂದಿ, ಮುಖ್ಯಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

