ಬೆಂಗಳೂರು: ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ (Rupee) ಮೌಲ್ಯ ಸಾರ್ವಕಾಲಿಕ ಕುಸಿತ ಕಾಣುತ್ತಿರುವುದು ಸಾರ್ವಜನಿಕರಲ್ಲಿ ಭಾರಿ ಆತಂಕ ಮೂಡಿಸಿದೆ. 2026ರ ಆರಂಭದಿಂದಲೂ ಏಷ್ಯಾದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಕರೆನ್ಸಿಗಳಲ್ಲಿ ಭಾರತೀಯ ರೂಪಾಯಿ ಕೂಡ ಒಂದಾಗಿದ್ದು, ಕಳೆದ ಕೆಲವು ತಿಂಗಳುಗಳಲ್ಲಿ ಇದು ಸುಮಾರು 5.5% ರಷ್ಟು ಕುಸಿತ ಕಂಡಿದೆ.
ಮುಂಬರುವ ದಿನಗಳಲ್ಲಿ ರೂಪಾಯಿ ಮೌಲ್ಯ ಬರೋಬ್ಬರಿ 100ರ ಗಡಿ ಮುಟ್ಟಲಿದೆ ಎನ್ನುವ ಮುನ್ಸೂಚನೆಗಳ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ (EAC-PM) ಸದಸ್ಯೆ ಡಾ. ಶಮಿಕಾ ರವಿ ಹಾಗೂ ಪ್ರಮುಖ ಆರ್ಥಿಕ ತಜ್ಞೆ ಸಂಜು ವರ್ಮಾ ನೀಡಿರುವ ಜಂಟಿ ವಿಶ್ಲೇಷಣೆಗಳು ಈಗ ದೇಶಾದ್ಯಂತ ಭಾರಿ ಸಂಚಲನ ಹಾಗೂ ಚರ್ಚೆಗೆ ಕಾರಣವಾಗಿವೆ.
ಸುದ್ದಿ ಸಂಸ್ಥೆ ಎಎನ್ಐ (ANI) ಪಾಡ್ಕಾಸ್ಟ್ನಲ್ಲಿ ಪತ್ರಕರ್ತೆ ಸ್ಮಿತಾ ಪ್ರಕಾಶ್ ಅವರೊಂದಿಗೆ ಮಾತನಾಡಿದ್ದ ಶಮಿಕಾ ರವಿ, ಡಾಲರ್ ಎದುರು ರೂಪಾಯಿ ಮೌಲ್ಯ 100 ತಲುಪಿದರೆ ಏನಂತೆ? 100 ಎಂಬುದು ಕೇವಲ ಒಂದು ಸಂಖ್ಯೆಯಷ್ಟೇ ಎಂದು ಆತಂಕವನ್ನು ತಳ್ಳಿಹಾಕಿದ್ದರು. ಈಗ ಅವರ ಈ ವಾದಕ್ಕೆ ಖ್ಯಾತ ಆರ್ಥಿಕ ತಜ್ಞೆ ಸಂಜು ವರ್ಮಾ ಕೂಡ ಧ್ವನಿ ಗೂಡಿಸಿದ್ದು, ರೂಪಾಯಿ 100 ಮುಟ್ಟಿದರೂ ಪ್ಯಾನಿಕ್ ಆಗುವ ಅಗತ್ಯವಿಲ್ಲ ಎಂದು ಬರೆದಿದ್ದಾರೆ. ಹಾಗಾದರೆ, ಈ ಇಬ್ಬರು ಪ್ರಮುಖ ಆರ್ಥಿಕ ತಜ್ಞರು ರೂಪಾಯಿ ಕುಸಿತವನ್ನು ಸಮರ್ಥಿಸಿಕೊಳ್ಳುತ್ತಿರುವುದರ ಹಿಂದಿರುವ ಅಸಲಿ ಆರ್ಥಿಕ ತರ್ಕವೇನು? ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತದ ಆಕ್ಷನ್ ಪ್ಲಾನ್ ಹೇಗಿದೆ?
ಶಮಿಕಾ ರವಿ ಮಂಡಿಸಿದ ಪ್ರೆಶರ್ ಕುಕ್ಕರ್ ವಾಲ್ವ್ ಸಿದ್ಧಾಂತ
ರೂಪಾಯಿ ಮೌಲ್ಯವನ್ನು ಬಲವಂತವಾಗಿ ಕರಗಿಸುವುದಕ್ಕಿಂತ ಜಾಗತಿಕ ಸಪ್ಲೈ ಶಾಕ್ (ಪೂರೈಕೆ ಬಿಕ್ಕಟ್ಟು) ನಿರ್ವಹಿಸುವುದರ ಕಡೆಗೆ ಗಮನ ಹರಿಸಬೇಕು ಎನ್ನುವುದು ಶಮಿಕಾ ರವಿ ಅವರ ಪ್ರಮುಖ ವಾದವಾಗಿದೆ
ಕುಕ್ಕರ್ ವಾಲ್ವ್ ತಂತ್ರ: ವಿನಿಮಯ ದರವನ್ನು ಪ್ರೆಶರ್ ಕುಕ್ಕರ್ನ ವಾಲ್ವ್ಗೆ ಹೋಲಿಸಿದ ಅವರು, ಅರ್ಥವ್ಯವಸ್ಥೆಯಲ್ಲಿ ಜಾಗತಿಕ ಒತ್ತಡ ಹೆಚ್ಚಾದಾಗ ಆ ಒತ್ತಡವನ್ನು ಹೊರಹಾಕಲು ರೂಪಾಯಿ ಮೌಲ್ಯದ ಏರಿಳಿತ ಒಂದು ವಾಲ್ವ್ ಇದ್ದಂತೆ ಕೆಲಸ ಮಾಡುತ್ತದೆ. ಮಾರುಕಟ್ಟೆಯು ತನ್ನದೇ ಆದ ರೀತಿಯಲ್ಲಿ ರೂಪಾಯಿಯ ನಿಜವಾದ ಮೌಲ್ಯವನ್ನು ಕಂಡುಕೊಳ್ಳಲು ಬಿಡಬೇಕು ಎಂದಿದ್ದಾರೆ
ಹಸ್ತಕ್ಷೇಪ ಬೇಡ, ಹಣದುಬ್ಬರ ಗ್ಯಾರಂಟಿ: ಸರ್ಕಾರ ಅಥವಾ ಆರ್ಬಿಐ (RBI) ಮಾರುಕಟ್ಟೆಯ ಮಧ್ಯೆ ಬಂದು ಬಲವಂತವಾಗಿ ರೂಪಾಯಿ ಮೌಲ್ಯವನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಬಾರದು. ಇದು ದೇಶದಲ್ಲಿ ಭಾರಿ ಹಣದುಬ್ಬರ ಮತ್ತು ಇತರೆ ಆರ್ಥಿಕ ಗೊಂದಲಗಳಿಗೆ (Chaotic Impacts) ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ
ವಿದೇಶಿ ವಿನಿಮಯ ನಿಧಿಯ ಬಳಕೆ: ಭಾರತವು ಈಗಾಗಲೇ ತನ್ನ ವಿದೇಶಿ ವಿನಿಮಯ ಮೀಸಲು (Forex Reserves) ನಿಧಿಯನ್ನು ಬಳಸಿಕೊಳ್ಳುತ್ತಿದೆ. ಇದು ಎಲ್ಲಿಯವರೆಗೆ ಸಾಧ್ಯ? ಎಂಬ ಪ್ರಶ್ನೆಗೆ ಅಗತ್ಯವಿರುವ ತನಕ ಎಂದು ಉತ್ತರಿಸಿದ್ದಾರೆ. ಅಲ್ಲದೆ, ಯುಎಇ (UAE) ಜೊತೆಗಿನ ಭಾರತದ ಪ್ರಮುಖ ಒಪ್ಪಂದವು ದೀರ್ಘಾವಧಿಯ ಇಂಧನ ಭದ್ರತೆ ಮತ್ತು ವಿದೇಶಿ ವಿನಿಮಯ ನಿಧಿಯನ್ನು ಮತ್ತೆ ತುಂಬಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ರೂಪಾಯಿ ಕುಸಿತಕ್ಕೆ ಅಸಲಿ ಕಾರಣವೇನು?
ದೇಶದಲ್ಲಿ ಬೆಲೆ ಏರಿಕೆ ಹೆಚ್ಚಾಗುತ್ತಿರುವುದಕ್ಕೆ ಬಾಹ್ಯ ಜಗತ್ತಿನ ಸಪ್ಲೈ ಬಿಕ್ಕಟ್ಟೇ ಕಾರಣ ಎಂದು ಶಮಿಕಾ ರವಿ ಸ್ಪಷ್ಟಪಡಿಸಿದ್ದಾರೆ: ಪಶ್ಚಿಮ ಏಷ್ಯಾ ಸಂಘರ್ಷ: ಪಶ್ಚಿಮ ಏಷ್ಯಾದಲ್ಲಿ (West Asia) ನಡೆಯುತ್ತಿರುವ ಭೀಕರ ಸಂಘರ್ಷದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ.
ಭಾರತದ ಆಮದು ಅವಲಂಬನೆ: ಭಾರತವು ತನಗೆ ಬೇಕಾದ 88% ಕಚ್ಚಾ ತೈಲ ಮತ್ತು ಅರ್ಧದಷ್ಟು ನೈಸರ್ಗಿಕ ಅನಿಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಪ್ರಮುಖ ಜಲಮಾರ್ಗವಾದ ಸ್ಟ್ರೈಟ್ ಆಫ್ ಹಾರ್ಮುಜ್ ಬ್ಲಾಕ್ ಆಗಿರುವುದು ಭಾರತಕ್ಕೆ ಸಪ್ಲೈ ಶಾಕ್ (Supply Shock) ನೀಡಿದೆ. ಇದು ನಾವು ದೇಶೀಯವಾಗಿ ಮಾಡಿದ ತಪ್ಪಲ್ಲ, ಜಾಗತಿಕ ಪರಿಸ್ಥಿತಿಯ ಎಫೆಕ್ಟ್ ಎಂದು ಅವರು ವಿವರಿಸಿದ್ದಾರೆ.
ಪ್ರಧಾನಿ ಮೋದಿಯವರ ಮಿತವ್ಯಯ ಮಂತ್ರ ಮತ್ತು ಕಠಿಣ ನಿಯಮಗಳು
ಈ ಜಾಗತಿಕ ಇಂಧನ ಮತ್ತು ಸರಬರಾಜು ಬಿಕ್ಕಟ್ಟನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕೆಲವು ಮಹತ್ವದ ಕರೆ ನೀಡಿದ್ದಾರೆ. “ದೇಶವೇ ಎಲ್ಲಕ್ಕಿಂತ ಮಿಗಿಲು” ಎಂದು ನೆನಪಿಸಿ ಜವಾಬ್ದಾರಿಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮೂರು ಪ್ರಮುಖ ಸೂತ್ರಗಳನ್ನು ನೀಡಿದ್ದರು
ಭದ್ರವಾಗಿರುವ ಆರ್ಥಿಕ ಅಡಿಪಾಯ: ಭಾರತದ ಹಣಕಾಸಿನ ಕೊರತೆ (Fiscal Deficit) 4.4% ನಷ್ಟಿದೆ, ಚಾಲ್ತಿ ಖಾತೆ ಕೊರತೆ (CAD) 1% ಕ್ಕಿಂತ ಕಡಿಮೆ ಇದೆ ಮತ್ತು ಚಿಲ್ಲರೆ ಹಣದುಬ್ಬರ (Retail Inflation) 4% ಕ್ಕಿಂತ ಕೆಳಗಿದೆ. ಈ ಅಂಕಿ-ಅಂಶಗಳು ಭಾರತದ ಆರ್ಥಿಕತೆಯ ಸದೃಢತೆಯನ್ನು ತೋರಿಸುತ್ತವೆ.
ರಫ್ತು ಮತ್ತು ಉತ್ಪಾದನೆಗೆ ಬೂಸ್ಟ್:
ರೂಪಾಯಿ ಮೌಲ್ಯವು ಕ್ರಮೇಣವಾಗಿ ಕುಸಿಯುವುದರಿಂದ ಭಾರತದ ರಫ್ತು (Exports) ವಲಯಕ್ಕೆ ಭಾರಿ ಲಾಭವಾಗಲಿದೆ. ಇದು ದೇಶದ ಉತ್ಪಾದನಾ ಕ್ಷೇತ್ರ (Manufacturing), ಮಾಹಿತಿ ತಂತ್ರಜ್ಞಾನ (IT), ಫಾರ್ಮಾಸ್ಯುಟಿಕಲ್ಸ್ (ಔಷಧ ವಲಯ) ಮತ್ತು ಕೃಷಿ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ
ಪ್ರವಾಸೋದ್ಯಮ ಪ್ರಗತಿ: ಈ ಬದಲಾವಣೆಯಿಂದ ವಿದೇಶಿಗರು ಭಾರತಕ್ಕೆ ಬರುವುದು ಹೆಚ್ಚಾಗಿ ಪ್ರವಾಸೋದ್ಯಮ (Tourism) ಬೆಳೆಯುತ್ತದೆ ಹಾಗೂ ದೇಶೀಯವಾಗಿ ಉತ್ಪಾದನೆ ಹೆಚ್ಚಾಗಲು ಪ್ರೇರಣೆ ಸಿಗುತ್ತದೆ. ರೂಪಾಯಿ ಮೌಲ್ಯ ಏನೇ ಆದರೂ, ಭಾರತದ ಬೆಳವಣಿಗೆಯ ಕಥೆ ಯಾವುದೇ ಅಡೆತಡೆಯಿಲ್ಲದೆ ಭದ್ರವಾಗಿ ಮುಂದುವರಿಯಲಿದೆ ಎಂದು ಸಂಜು ವರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ

