ನಮ್ಮ ಇಡೀ ದೇಹದಲ್ಲಿ ಮೂತ್ರಪಿಂಡಗಳು (ಕಿಡ್ನಿ) ಪ್ರಮುಖ ಪಾತ್ರ ವಹಿಸುತ್ತವೆ. ಇವು ಸರಿಯಾಗಿ ಕೆಲಸ ಮಾಡದಿದ್ದರೆ, ನಮ್ಮ ಜೀವನವೇ ಅಸಾಧ್ಯ. ಏಕೆಂದರೆ ಇವು ನಮ್ಮ ದೇಹದಿಂದ ಕಲ್ಮಶಗಳನ್ನು ಶುದ್ಧೀಕರಿಸಿ, ರಕ್ತವನ್ನು ಸೋಸುತ್ತವೆ.
ಆದರೆ, ಇವು ಕ್ಷೀಣಿಸುವ ಮುನ್ನ ನಮ್ಮ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಈ ಸಂಕೇತಗಳನ್ನು ನಿರ್ಲಕ್ಷಿಸುವುದು ಸಂಪೂರ್ಣ ಮೂತ್ರಪಿಂಡ ವೈಫಲ್ಯಕ್ಕೆ (Kidney Failure) ದಾರಿ ಮಾಡಿಕೊಡಬಹುದು. ಆದ್ದರಿಂದ, ಸರಿಯಾದ ಸಮಯದಲ್ಲಿ ಇವುಗಳನ್ನು ಗುರುತಿಸುವುದರಿಂದ ದೊಡ್ಡ ಹಾನಿಯನ್ನು ತಪ್ಪಿಸಬಹುದು. ಹಾಗಾದರೆ ಮೂತ್ರಪಿಂಡಗಳು ಹಾಳಾಗುವ ಮುನ್ನ ನಮ್ಮಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೇನು ಎಂಬುದನ್ನು ನೋಡೋಣ.
ಮೂತ್ರಪಿಂಡದ ಸಮಸ್ಯೆ ಉಂಟಾಗುವ ಮುನ್ನ ಕಾಣಿಸಿಕೊಳ್ಳುವ ಲಕ್ಷಣಗಳು:
- ಮೂತ್ರದಲ್ಲಿ ಬದಲಾವಣೆ: ನಿಮ್ಮ ಮೂತ್ರಪಿಂಡಗಳು ಹಾನಿಗೊಳಗಾಗುತ್ತಿದ್ದರೆ, ಮೊದಲ ಸಂಕೇತ ನಿಮ್ಮ ಮೂತ್ರದಲ್ಲೇ ಕಾಣಿಸಿಕೊಳ್ಳುತ್ತದೆ. ಮೂತ್ರದಲ್ಲಿ ನೊರೆ ಬರುವುದು, ಮೂತ್ರ ವಿಸರ್ಜನೆ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ರಾತ್ರಿಯ ವೇಳೆ ಪದೇ ಪದೇ ಮೂತ್ರ ವಿಸರ್ಜನೆಗೆ ಏಳುವುದು ಅಥವಾ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಸಮಸ್ಯೆಯ ಲಕ್ಷಣಗಳಾಗಿರಬಹುದು. ಪ್ರೋಟೀನ್ ಲೀಕೇಜ್ ಅಥವಾ ಸೋಸುವ ಪ್ರಕ್ರಿಯೆ ಸರಿಯಾಗಿ ನಡೆಯದಿದ್ದಾಗ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
- ಕಾಲು, ಮುಖದ ಊತ: ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದಿದ್ದರೆ, ದೇಹದಲ್ಲಿ ನೀರು ಉಳಿದುಕೊಳ್ಳುತ್ತದೆ. ಇದರಿಂದ ಪಾದಗಳು, ಮಣಿಕಟ್ಟು, ಕೈಗಳು ಅಥವಾ ಮುಖ ಊದಿಕೊಳ್ಳುತ್ತವೆ. ಬೆಳಿಗ್ಗೆ ನಿದ್ದೆ ಎದ್ದಾಗ ಕಣ್ಣಿನ ಕೆಳಗೆ ಊತ ಕಂಡುಬಂದರೆ ಎಚ್ಚೆತ್ತುಕೊಳ್ಳಿ.
- ಯಾವಾಗಲೂ ಸುಸ್ತಾಗುವುದು: ಮೂತ್ರಪಿಂಡ ವೈಫಲ್ಯದಿಂದಾಗಿ ರಕ್ತದಲ್ಲಿ ಕಲ್ಮಶಗಳು ಸಂಗ್ರಹವಾಗುತ್ತವೆ, ಇದರಿಂದ ವಿಪರೀತ ಆಯಾಸ ಉಂಟಾಗುತ್ತದೆ. ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೂ ಸಹ ಸುಸ್ತು ಅಥವಾ ನೀರಸವಾಗಿ ಕಂಡುಬರುವುದು ಇದರ ಸಂಕೇತವಾಗಿರಬಹುದು.
- ಚರ್ಮದ ತುರಿಕೆ, ಹಸಿವಾಗದಿರುವುದು: ರಕ್ತದಲ್ಲಿ ವಿಷಪೂರಿತ ಪದಾರ್ಥಗಳು ಹೆಚ್ಚಾಗುವುದರಿಂದ ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ಜತೆಗೆ ವಾಕರಿಕೆ, ವಾಂತಿ ಅಥವಾ ಹಸಿವಾಗದಿರುವುದು ಸಾಮಾನ್ಯ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಲಕ್ಷಣಗಳು ಕಂಡುಬಂದರೆ ಏನು ಮಾಡಬೇಕು ?
ನಿಮಗೆ ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ. ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಮೂಲಕ ಸಮಸ್ಯೆಯನ್ನು ಖಚಿತಪಡಿಸಿಕೊಳ್ಳಿ. ಬಿಪಿ (BP) ಅಥವಾ ಸಕ್ಕರೆ ಕಾಯಿಲೆ (Sugar) ಇರುವವರು ಈ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಇವರು ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡುತ್ತಿರಬೇಕು. ಅಲ್ಲದೆ, ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು, ಹೆಚ್ಚು ನೀರು ಕುಡಿಯುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ. ನಮ್ಮ ದೈನಂದಿನ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕವೂ ಈ ಸಮಸ್ಯೆಯನ್ನು ತಡೆಗಟ್ಟಬಹುದು.

