ಬೀದಿಯಲ್ಲಿ ಪ್ರವಾಸಿಗರನ್ನು ತನ್ನ ಮ್ಯಾಜಿಕ್ ಟ್ರಿಕ್ಸ್ ಮೂಲಕ ಮಂತ್ರಮುಗ್ಧರನ್ನಾಗಿಸುತ್ತಿದ್ದ ಪುಟ್ಟ ಬಾಲಕನೊಬ್ಬ, ಇದೀಗ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದ್ದಾನೆ. ಬಾಲಕನ ಅದ್ಭುತ ಕೈಚಳಕ ಮತ್ತು ಆತ್ಮವಿಶ್ವಾಸಕ್ಕೆ ಫಿದಾ ಆದ ಮಹೀಂದ್ರಾ, ಅವನ ವಿದ್ಯಾಭ್ಯಾಸ ಹಾಗೂ ಮ್ಯಾಜಿಕ್ ಕಲೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸುವ ಮೂಲಕ ಆ ಪುಟ್ಟ ಕಲಾವಿದನ ಬಾಳಿಗೆ ಆಸರೆಯಾಗಲು ಮುಂದಾಗಿದ್ದಾರೆ.
ಹೌದು. ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ವಿಶಿಷ್ಟ ಪ್ರತಿಭೆಯುಳ್ಳ ಸಾಮಾನ್ಯರನ್ನು ಜಗತ್ತಿಗೆ ಪರಿಚಯಿಸುತ್ತಿರುತ್ತಾರೆ. ಇತ್ತೀಚೆಗೆ ಅವರು ಉತ್ತರಾಖಂಡದ ಸುಂದರ ನೈನಿತಾಲ್ ಪಟ್ಟಣದ ಬೀದಿ ಬಾಲಕನೊಬ್ಬನ ಮ್ಯಾಜಿಕ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ಬಾಲಕನ ಅಸಾಧಾರಣ ಪ್ರತಿಭೆಗೆ ಮಾರುಹೋದ ಮಹೀಂದ್ರಾ, ಅವನನ್ನು ಶ್ಲಾಘಿಸಿದ್ದಲ್ಲದೆ, ಅವನ ಭವಿಷ್ಯಕ್ಕೆ ನೆರವಾಗಲು ಮುಂದಾಗಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಪುಟ್ಟ ಬಾಲಕನೊಬ್ಬ ರಸ್ತೆ ಬದಿಯಲ್ಲಿ ನಿಂತು ಪ್ರವಾಸಿಗರು ಮತ್ತು ವೀಕ್ಷಕರಿಗಾಗಿ ಅದ್ಭುತವಾದ ಮ್ಯಾಜಿಕ್ ಟ್ರಿಕ್ಸ್ ಪ್ರದರ್ಶಿಸುತ್ತಿದ್ದಾನೆ. ಕೆಲವು ಲೋಹದ ಕಪ್‌ಗಳು ಮತ್ತು ಸಣ್ಣ ಕೆಂಪು ಚೆಂಡುಗಳನ್ನು ಬಳಸಿ ಅವನು ಮಾಡುತ್ತಿರುವ ಮ್ಯಾಜಿಕ್ ನೋಡುವವರನ್ನು ಅಚ್ಚರಿಗೊಳಿಸುತ್ತಿದೆ. ಬಾಲಕ ಮೊದಲು ಚೆಂಡುಗಳನ್ನು ಕಪ್‌ಗಳ ಅಡಿಯಲ್ಲಿ ಇಟ್ಟು, ತನ್ನ ಕೈಚಳಕದಿಂದ ಅತೀ ವೇಗವಾಗಿ ಅವುಗಳನ್ನು ಚಲಾಯಿಸುತ್ತಾನೆ. ಆ ಚೆಂಡುಗಳು ಕೆಲವೊಮ್ಮೆ ಮಾಯವಾಗುತ್ತಿದ್ದರೆ, ಮತ್ತೆ ಕೆಲವೊಮ್ಮೆ ಊಹಿಸಲಾಗದಂತೆ ಇನ್ನೊಂದು ಕಪ್ ಅಡಿಯಲ್ಲಿ ಕಾಣಿಸಿಕೊಳ್ಳುತ್ತಾ ವೀಕ್ಷಕರನ್ನು ದಿಗ್ಭ್ರಮೆಗೊಳಿಸುತ್ತವೆ. ಅವನ ವೇಗ, ನಿಖರತೆ ಮತ್ತು ಸಮಯ ಪ್ರಜ್ಞೆ ವೃತ್ತಿಪರ ಜಾದೂಗಾರರನ್ನು ನೆನಪಿಸುತ್ತವೆ. ಕೇವಲ ಟ್ರಿಕ್ಸ್ ಮಾತ್ರವಲ್ಲದೆ, ಆ ಬಾಲಕನ ಮುಖಭಾವ, ಮಾತುಕತೆ ಮತ್ತು ಪ್ರೇಕ್ಷಕರನ್ನು ಆಕರ್ಷಿಸುವ ಆತ್ಮವಿಶ್ವಾಸ ಅವನ ವಯಸ್ಸಿಗಿಂತ ಹೆಚ್ಚು ಪ್ರಬುದ್ಧವಾಗಿದೆ.
ಈ ವಿಡಿಯೋ ಆನಂದ್ ಮಹೀಂದ್ರಾ ಅವರ ಗಮನಕ್ಕೆ ಬಂದಾಗ ಅವರು ಬಾಲಕನ ಪ್ರತಿಭೆಗೆ ಮಂತ್ರಮುಗ್ಧರಾದರು. “ಈ ಪುಟ್ಟ ಬಾಲಕ ಅದ್ಭುತ ಪ್ರತಿಭಾವಂತ” ಎಂದು ಶ್ಲಾಘಿಸುತ್ತಾ ‘ಎಕ್ಸ್’ (X) ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಬಾಲಕ ಈಗಲೂ ನೈನಿತಾಲ್ ಬೀದಿಗಳಲ್ಲೇ ಇದ್ದಾನೆಯೇ ಎಂದು ತಿಳಿಯಲು ಬಯಸಿರುವ ಅವರು, “ಅವನಿಗೆ ಸರಿಯಾದ ಅವಕಾಶ ಸಿಕ್ಕರೆ ಭವಿಷ್ಯದಲ್ಲಿ ಜಗತ್ತಿನ ಶ್ರೇಷ್ಠ ಜಾದೂಗಾರರಲ್ಲಿ ಒಬ್ಬನಾಗಿ ಏಕೆ ಬೆಳೆಯಬಾರದು?” ಎಂದು ಪ್ರಶ್ನಿಸಿದ್ದಾರೆ. ಆ ಬಾಲಕನ ವಿದ್ಯಾಭ್ಯಾಸದೊಂದಿಗೆ, ಮ್ಯಾಜಿಕ್ ಕಲೆಯ ಬಗೆಗಿನ ಅವನ ಆಸಕ್ತಿಗೆ ತಾನೇ ಸ್ವತಃ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಬಾಲಕನ ವಿವರಗಳು ಮತ್ತು ಅವನ ಪೋಷಕರ ಸಂಪರ್ಕ ಸಂಖ್ಯೆ ತಿಳಿದಿದ್ದರೆ ತಮಗೆ ತಿಳಿಸಬೇಕೆಂದು ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ.
ಆನಂದ್ ಮಹೀಂದ್ರಾ ಅವರ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಭಾರತದಲ್ಲಿ ಇಂತಹ ಅಪ್ರತಿಮ ಪ್ರತಿಭೆಗಳಿಗೆ ಕೊರತೆಯಿಲ್ಲ, ಆದರೆ ಆರ್ಥಿಕ ಸಂಕಷ್ಟದಿಂದಲೇ ಅನೇಕರು ಹಿಂದುಳಿಯುತ್ತಿದ್ದಾರೆ ಎಂದು ನೆಟಿಜನ್‌ಗಳು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಆ ಪುಟ್ಟ ಬಾಲಕನನ್ನು ಹುಡುಕಲು ಸಾಮಾಜಿಕ ಜಾಲತಾಣದ ಮಂದಿ ಸಜ್ಜಾಗಿದ್ದಾರೆ.

