ಬೆಂಗಳೂರು: 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರದ ನಿಯಮಿತ ಪಿಂಚಣಿದಾರರು ಮತ್ತು ಅವರ ಕುಟುಂಬ ಪಿಂಚಣಿದಾರರು ಮತ್ತು ಅವಲಂಬಿತ ದಿವ್ಯಾಂಗ ಮಕ್ಕಳಿಗಾಗಿ ಸಂಧ್ಯಾ ಕಿರಣ ವಂತಿಕೆ ಆಧಾರಿತ ನಗದು ರಹಿತ ಆರೋಗ್ಯ ಯೋಜನೆ ಜಾರಿಗೆ ಸರ್ಕಾರ ಆದೇಶ ಹೊರಡಿಸಿದೆ.
1956ರ ನವೆಂಬರ್ 1ರ ನಂತರ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿ ರಾಜ್ಯ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವವರು ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳ ಕುಟುಂಬಕ್ಕೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ನಿಯಮಗಳ ಪ್ರಕಾರ ಪ್ರತಿ ವರ್ಷ ಗರಿಷ್ಠ 5 ಲಕ್ಷ ರೂ. ವರೆಗೆ ವಂತಿಕೆ ಆಧಾರದ ಮೇಲೆ ನಗದು ರಹಿತ ಆರೋಗ್ಯ ಸೇವೆ ನೀಡಲಾಗುವುದು.
ಯೋಜನೆಯ ಒಟ್ಟು ವೆಚ್ಚದಲ್ಲಿ ಶೇಕಡ 70ರಷ್ಟನ್ನು ಪಿಂಚಣಿದಾರರ ವಂತಿಕೆಯಿಂದ, ಉಳಿದ ಶೇಕಡ 30ರಷ್ಟು ಮೊತ್ತವನ್ನು ಸರ್ಕಾರದಿಂದ ಭರಿಸಲಾಗುವುದು. ನಿಯಮಿತ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯ ಶೇಕಡ 1.25 ರಷ್ಟು ವಂತಿಕೆ ನೀಡಬೇಕು. ಕುಟುಂಬ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯ ಶೇಕಡ 0.75 ರಷ್ಟು ವಂತಿಕೆ ನೀಡಬೇಕು. ಯೋಜನೆಗೆ ಸೇರಲು ಇಚ್ಛಿಸುವ ಹಾಲಿ ಪಿಂಚಣಿದಾರರ ನೋಂದಣಿಗೆ ಮೂರು ತಿಂಗಳ ನಿಶ್ಚಿತ ಅವಧಿ ನೀಡಲಾಗಿದೆ. ಮುಂದೆ ನಿವೃತ್ತಿಯಾಗುವವರು ನಿವೃತ್ತಿ ದಿನಾಂಕದಿಂದ ಎರಡು ತಿಂಗಳ ಒಳಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರಿ ನಿಯಮಿತ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರಿಗೆ " ಸಂಧ್ಯಾ ಕಿರಣ " ನಗದು ರಹಿತ ಆರೋಗ್ಯ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಸರ್ಕಾರದ ಆದೇಶ.@CMofKarnataka @DrParameshwara @utkhader @KarnatakaVarthe pic.twitter.com/7GkNobzkLV
— Karnataka Health Department (@DHFWKA) September 3, 2026

