HomeHealthಕ್ಯಾನ್ಸರ್ ಔಷಧಿಗಳ ಗರಿಷ್ಠ ಮಾರಾಟ ಬೆಲೆಯಲ್ಲಿ ಭಾರಿ ಕಡಿತ: ಅಧಿಕೃತ ಪ್ರಕಟಣೆ ಹೊರಡಿಸಿದ ಟೊರೆಂಟ್ ಫಾರ್ಮಾ:...

ಕ್ಯಾನ್ಸರ್ ಔಷಧಿಗಳ ಗರಿಷ್ಠ ಮಾರಾಟ ಬೆಲೆಯಲ್ಲಿ ಭಾರಿ ಕಡಿತ: ಅಧಿಕೃತ ಪ್ರಕಟಣೆ ಹೊರಡಿಸಿದ ಟೊರೆಂಟ್ ಫಾರ್ಮಾ: ಪರಿಷ್ಕತ ದರ ನವೆಂಬರ್ 9ರಿಂದ ಜಾರಿ

ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. 137 ಪ್ರಮುಖ ಜೀವ ರಕ್ಷಕ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯಲ್ಲಿ ಶೇಕಡಾ 70ರವರೆಗೆ ಭಾರಿ ಕಡಿತಗೊಳಿಸಿದೆ.

ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ಹೊರಡಿಸಿರುವ ಈ ಮಹತ್ವದ ಆದೇಶವು ನವೆಂಬರ್ 9 ರಿಂದ ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸಾ ವೆಚ್ಚದ ಹೊರೆ ತಗ್ಗಿಸುವ ನಿಟ್ಟಿನಲ್ಲಿ NPPA ಹೊರಡಿಸಿರುವ ಮಹತ್ವದ ಆದೇಶದ ಮೇರೆಗೆ, ಪ್ರಮುಖ ಔಷಧ ಸಂಸ್ಥೆ ಟೊರೆಂಟ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್(Torrent Pharmaceuticals Ltd) ತನ್ನ ಪ್ರಮುಖ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ಶೇ.70ರವರೆಗೂ ಗಣನೀಯವಾಗಿ ಇಳಿಕೆ ಮಾಡಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ಪರಿಷ್ಕೃತ ನೂತನ ದರಗಳು ನವೆಂಬರ್ 9 ರಿಂದ ಜಾರಿಗೆ ಬರಲಿವೆ. ಈ ನಿಯಮ ಪಾಲನೆಯ ಭಾಗವಾಗಿ ಟೊರೆಂಟ್ ಫಾರ್ಮಾ ತನ್ನ ಉತ್ಪಾದನೆಯ ಜೀವರಕ್ಷಕ ಕ್ಯಾನ್ಸರ್ ಇಂಜೆಕ್ಷನ್‌ಗಳು, ಮಾತ್ರೆಗಳು ಹಾಗೂ ಕ್ಯಾಪ್ಸೂಲ್‌ಗಳ ದರವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ.

ಔಷಧ ಮಾರಾಟ ಜಾಲದಲ್ಲಿ ವಿಪರೀತ ಲಾಭದ ಅಂತರ ಇರುವುದನ್ನು ತಪ್ಪಿಸಲು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದ ಎನ್‌ಪಿಪಿಎ ವ್ಯಾಪಾರ ಲಾಭಾಂಶಕ್ಕೆ ಗರಿಷ್ಠ ಶೇ. 30ರ ಮಿತಿ (ಟ್ರೇಡ್ ಮಾರ್ಜಿನ್ ಕ್ಯಾಪಿಂಗ್) ವಿಧಿಸಿದೆ.

ಈ ದರ ಕಡಿತದ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಬೇಕು ಎಂದು ಸಂಸ್ಥೆಯು ಎಲ್ಲಾ ಸಗಟು ವ್ಯಾಪಾರಿಗಳು, ಚಿಲ್ಲರೆ ಮಾರಾಟಗಾರರು, ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಸಾರ್ವಜನಿಕ ಪ್ರಕಟಣೆಯ ಮೂಲಕ ಸೂಚಿಸಿದೆ. ನವೆಂಬರ್ 9ರಿಂದ ಜಾರಿಗೆ ಬರುವಂತೆ, ಪ್ಯಾಕ್ ಮೇಲೆ ಮುದ್ರಿಸಲಾದ ದರ ಅಥವಾ ಪರಿಷ್ಕೃತ ದರ—ಇವೆರಡರಲ್ಲಿ ಯಾವುದು ಕಡಿಮೆಯೋ ಅದೇ ದರವನ್ನು ಗ್ರಾಹಕರಿಂದ ಪಡೆಯಬೇಕಾಗುತ್ತದೆ.

ಇನ್ನು ಕ್ಯಾಅನ್ಸ್ ಔಷಧಗಳ ಬೆಲೆ ಕಡಿತದ ಸರ್ಕಾರದ ಈ ನಿರ್ಧಾರದಿಂದಾಗಿ ದೇಶದ ಕ್ಯಾನ್ಸರ್ ರೋಗಿಗಳಿಗೆ ವಾರ್ಷಿಕವಾಗಿ ಸುಮಾರು ₹2,500 ಕೋಟಿ ರೂಪಾಯಿಗಳಷ್ಟು ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೇವಲ ಜೆನೆರಿಕ್ ಮಾತ್ರವಲ್ಲದೆ ಪೇಟೆಂಟ್ ಹೊಂದಿರುವ ಅತ್ಯಂತ ದುಬಾರಿ ಔಷಧಿಗಳ ಬೆಲೆಯೂ ಇಳಿಕೆಯಾಗಲಿದೆ. ಸ್ತನ ಕ್ಯಾನ್ಸರ್, ಪ್ರೊಸ್ಟೇಟ್, ಕೊಲೊನ್, ಗರ್ಭಕಂಠ ಹಾಗೂ ಶ್ವಾಸಕೋಶ ಸೇರಿದಂತೆ 20ಕ್ಕೂ ಹೆಚ್ಚು ತರಹದ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಪೆಂಬ್ರೋಲಿಜುಮಾಬ್ (Pembrolizumab), ನಿವೋಲುಮಾಬ್ (Nivolumab), ಮತ್ತು ಓಸಿಮರ್ಟಿನಿಬ್ (Osimertinib) ನಂತಹ ಪ್ರಮುಖ ಇಮ್ಯುನೊಥೆರಪಿ ಔಷಧಿಗಳ ದರ ಕೂಡ ಕಡಿಮೆಯಾಗಲಿವೆ.

ಗ್ರಾಹಕರು ಮತ್ತು ರೋಗಿಗಳ ಕುಟುಂಬದವರು ಪರಿಷ್ಕೃತಗೊಂಡ ಹೊಸ ಔಷಧಿಗಳ ಬೆಲೆಗಳನ್ನು ಸರ್ಕಾರದ ಅಧಿಕೃತ Pharma Sahi Daam ಮೊಬೈಲ್ ಆ್ಯಪ್ ಮೂಲಕ ಅಥವಾ NPPA ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಪರಿಶೀಲಿಸಬಹುದಾಗಿದೆ. ನವೆಂಬರ್ 9ರ ನಂತರ ಎಲ್ಲಾ ಆಸ್ಪತ್ರೆಗಳು ಮತ್ತು ಔಷಧಾಲಯಗಳು ಈ ಹೊಸ ದರಪಟ್ಟಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular