HomeKarnatakaಕೆಪಿಎಸ್‌ಸಿ ಅಕ್ರಮ: ಬಸವರಾಜ್ ಕನ್ನಾಳೆ ಆಪ್ತನ ಮನೆ ಮೇಲೆ ಸಿಐಡಿ ದಾಳಿ

ಕೆಪಿಎಸ್‌ಸಿ ಅಕ್ರಮ: ಬಸವರಾಜ್ ಕನ್ನಾಳೆ ಆಪ್ತನ ಮನೆ ಮೇಲೆ ಸಿಐಡಿ ದಾಳಿ

ಬೀದರ್: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಆಪ್ತನ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆರೋಪಿ ಬಸವರಾಜ್ ಕನ್ನಾಳೆ ಆಪ್ತ ಪವನ್ ರೆಡ್ಡಿ ಮನೆ ಮೇಲೆ ಕಲಬುರಗಿ ವಿಭಾಗೀಯ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ಮನ್ನಾಏಖೇಳಿ ಗ್ರಾಮದಲ್ಲಿರುವ ಪವನ್ ರೆಡ್ಡಿ ಮನೆ ಮೇಲೆ ಸಿಐಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸತತ ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದು, ಎಲ್ಲಾ ದಾಖಲೆಗಳು ಮತ್ತು ಮನೆಯವರಿಂದ ಮಾಹಿತಿ ಪಡೆದಿದ್ದಾರೆ. ಕೆಲ ದಾಖಲೆಗಳ ಸಮೇತ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಸಿಐಡಿ ಐದು ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ.

ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಸಿಲುಕಿರುವ ಬಸವರಾಜ್ ಕನ್ನೋಳಿ ಹಾಗೂ ಪವನ್ ರೆಡ್ಡಿ ಇಬ್ಬರೂ ಅತ್ಯಾಪ್ತರು. ಇಬ್ಬರೂ ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಬಂದಾಗ ಪರಿಚಯವಾಗಿದ್ದರು. ಬಳಿಕ ದೆಹಲಿಯಲ್ಲಿ ಇಬ್ಬರು ಒಟ್ಟಿಗೆ ಯುಪಿಎಸ್‌ಸಿ ತರಬೇತಿ ಪಡೆಯುತ್ತಿರುವ ವೇಳೆ ಅತ್ಯಾಪ್ತರಾಗಿದ್ದು, ಹೀಗಾಗಿ ಬಸವರಾಜ್ ಕನ್ನಾಳೆಯ ಜೊತೆ ಪವನ್ ರೆಡ್ಡಿ ಕೋಟ್ಯಾಂತರ ರೂಪಾಯಿ ಹಣಕಾಸು ವ್ಯವಹಾರ ಹೊಂದಿದ್ದಾನೆ ಎನ್ನಲಾಗಿದೆ.

ಕೆ‌ಪಿ‌ಎಸ್‌ಸಿಯಲ್ಲಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿಯೂ ಪವನ್ ರೆಡ್ಡಿ ಪಾಲುದಾರನಾಗಿದ್ದಾನೆಂದು ಶಂಕಿಸಲಾಗಿದ್ದು, ಈ ಹಿನ್ನೆಲೆ ದಾಳಿ ನಡೆಸಲಾಗಿದೆ.

ಕೆಪಿಎಸ್‌ಸಿ ಅಕ್ರಮ: ಬಸವರಾಜ್ ಕನ್ನಾಳೆ ಮನೆಯಲ್ಲಿ 15 ಗ್ರೂಪ್ ಬಿ ಹಾಲ್ ಟಿಕೆಟ್‌ಗಳು, ಮೊಬೈಲ್ ನಲ್ಲಿ ಪ್ರಭಾವಿಗಳ ನಂಬರ್ ಪತ್ತೆ

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ 15 ಗ್ರೂಪ್ ಬಿ ಹಾಲ್ ಟಿಕೆಟ್‌ಗಳು ಪತ್ತೆಯಾಗಿವೆ.

ಸಿಐಡಿ ಅಧಿಕಾರಿಗಳು, ಬಸವರಾಜ್ ಕನ್ನಾಳೆ ಬೆಂಗಳೂರಿನ ಸಂಜಯನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ವೇಳೆ ಸಿಕ್ಕ ಸಾಕ್ಷ್ಯಗಳನ್ನು ನೋಡಿ ದಂಗಾಗಿದ್ದಾರೆ. ಶೋಧದ ವೇಳೆ ಬಸವರಾಜ್ ಮನೆಯಲ್ಲಿ ಬರೋಬ್ಬರಿ 15 ಪರೀಕ್ಷೆಗಳ ಹಾಲ್ ಟಿಕೆಟ್‌ಗಳು ಪತ್ತೆಯಾಗಿವೆ. ಕೇವಲ ಪಶು ವೈದ್ಯಾಧಿಕಾರಿ ಹುದ್ದೆ ಮಾತ್ರವಲ್ಲದೆ ಬಿ-ಗ್ರೂಪ್ ಹುದ್ದೆಗಳ ಹಾಲ್ ಟಿಕೆಟ್ ಗಳು ಪತ್ತೆಯಾಗಿದ್ದು. ಕೆಎಎಸ್‌ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳೂ ಡೀಲ್ ಆಗಿರುವ ಅನುಮಾನ ವ್ಯಕ್ತವಾಗಿದೆ.

ಕೆಎಎಸ್‌ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಹೀಗೆ ಮೂರೂ ಹಂತಗಳಿಗೆ ಒಂದೇ ಪ್ಯಾಕೇಜ್ ದರ ನಿಗದಿಪಡಿಸಿ ಅಕ್ರಮ ಎಸಗಿರುವ ಸಾಧ್ಯತೆಯಿದೆ. ಸದ್ಯ ಪಶು ವೈದ್ಯಾಧಿಕಾರಿ ಹುದ್ದೆಯ ಅಕ್ರಮ ತನಿಖೆ ಮುಗಿಯುತ್ತಿದ್ದಂತೆ, ಉಳಿದ ಪರೀಕ್ಷೆಗಳ ಹಗರಣದ ಬಗ್ಗೆಯೂ ತನಿಖೆ ನಡೆಸಲು ಸಿಐಡಿ ಮುಂದಾಗಿದೆ. ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಕೆಎಎಸ್‌ ಹುದ್ದೆಗಳ ನೇಮಕಾತಿ ಅಕ್ರಮದ ಕುರಿತು ಪೂರ್ಣ ಪ್ರಮಾಣದ ತನಿಖೆ ನಡೆಸಲು ಸಿಐಡಿ ತೀರ್ಮಾನಿಸಿದೆ.

ಮೊಬೈಲ್ ನಲ್ಲಿ ಪ್ರಭಾವಿಗಳ ನಂಬರ್ ಪತ್ತೆ:

ಇನ್ನು ಆರೋಪಿ ಬಸವರಾಜ್ ಕನ್ನಾಳೆಯ ಮೊಬೈಲ್ ಫೋನ್ ಹಾಗೂ ಕರೆಗಳ ವಿವರ ಪರಿಶೀಲಿಸಿದ ಸಿಐಡಿ ಅಧಿಕಾರಿಗಳಿಗೆ ಆತನ ಹೈ-ಫೈ ರಾಜಕೀಯ ಸಂಪರ್ಕ ಇರುವುದು ಪತ್ತೆಯಾಗಿದೆ. ಕನ್ನಾಳೆಯ ಮೊಬೈಲ್‌ನಲ್ಲಿ ಶಾಸಕರು, ಸಂಸದರು ಸೇರಿದಂತೆ ದೇಶ ಹಾಗೂ ರಾಜ್ಯದ 50ಕ್ಕೂ ಹೆಚ್ಚು ಪ್ರಭಾವಿ ರಾಜಕೀಯ ವ್ಯಕ್ತಿಗಳ ಅಸಲಿ ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ.

ಈ ಬಗ್ಗೆ ಸಿಐಡಿ ಅಧಿಕಾರಿಗಳು ಕನ್ನಾಳೆಯನ್ನು ವಿಚಾರಿಸಿದಾಗ ನಾನೊಬ್ಬ ಬ್ಯುಸಿನೆಸ್‌ಮ್ಯಾನ್ ಹಾಗೂ ರಾಜಕಾರಣಿ. ನನಗೆ ಟ್ರಾವೆಲ್ಸ್ ಸೇರಿದಂತೆ ಹಲವು ಉದ್ದಿಮೆಗಳಿವೆ, ಹೀಗಾಗಿ ದೆಹಲಿಯಿಂದ ಭಾಲ್ಕಿಯವರೆಗೆ ಎಲ್ಲರೂ ನನಗೆ ಪರಿಚಿತರು ಎಂದು ಸಮಜಾಯಿಷಿ ನೀಡಿದ್ದಾನೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನವನಾಗಿದ್ದರೂ ಬಸವರಾಜ್ ಕನ್ನಾಳೆ ತುಮಕೂರು ವಿಶ್ವವಿದ್ಯಾಲಯದ ಹಾಲಿ ಸಿಂಡಿಕೇಟ್ ಸದಸ್ಯನಾಗಿದ್ದಾನೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ಬಿಜೆಪಿಯ ತುಮಕೂರಿನ ಪ್ರಭಾವಿ ನಾಯಕರೊಬ್ಬರ ನಿಕಟ ಸಂಪರ್ಕ ಬಳಸಿಕೊಂಡು ಈತ ಸಿಂಡಿಕೇಟ್ ಸದಸ್ಯ ಸ್ಥಾನ ಗಿಟ್ಟಿಸಿಕೊಂಡಿದ್ದನು ಎಂಬುದು ಸಿಐಡಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕೆಪಿಎಸ್‌ಸಿ ಅಕ್ರಮದ ಜೊತೆಗೆ ರಾಜ್ಯದಲ್ಲಿ ನಡೆದಿದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲೂ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಮಾಹಿತಿ ಸಿಐಡಿಗೆ ಲಭ್ಯವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular