ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿತ್ರರಂಗದಲ್ಲಿ ಇಂದು ಉತ್ತುಂಗದಲ್ಲಿರುವ ಸಮಂತಾ ಅವರ ಈ ಯಶಸ್ಸಿನ ಹಿಂದಿನ ಕಥೆ ಮಾತ್ರ ಅಷ್ಟು ಸುಲಭದ್ದಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಮಂತಾ ಇಂದು ಕೋಟ್ಯಂತರ ರೂಪಾಯಿ ಆಸ್ತಿಯ ಒಡತಿಯಾಗಿ ಬೆಳೆದು ನಿಂತಿರುವುದು ಅನೇಕರಿಗೆ ಸ್ಫೂರ್ತಿಯಾಗಿದೆ.
ಕಠಿಣ ಪರಿಶ್ರಮವೇ ಯಶಸ್ಸಿನ ಮೆಟ್ಟಿಲು ಓದುತ್ತಿದ್ದ ದಿನಗಳಲ್ಲಿ ತಮ್ಮ ಸ್ವಂತ ಖರ್ಚಿಗಾಗಿ ಸಮಂತಾ ಪಾರ್ಟ್ ಟೈಮ್ ಕೆಲಸಗಳನ್ನು ಮಾಡುತ್ತಿದ್ದರು. ನಂತರ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಅವರಿಗೆ ಏ ಮಾಯ ಚೇಸಾವೆ ಸಿನಿಮಾ ದೊಡ್ಡ ಬ್ರೇಕ್ ನೀಡಿತು. ಅಲ್ಲಿಂದ ಶುರುವಾದ ಇವರ ಸಿನಿಪಯಣದಲ್ಲಿ ಎಂದೂ ಹಿಂತಿರುಗಿ ನೋಡುವ ಪ್ರಮೇಯ ಬರಲಿಲ್ಲ. ವರದಿಗಳ ಪ್ರಕಾರ ಇಂದು ಸಮಂತಾ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಂದು ಕಾಲದಲ್ಲಿ ಸಣ್ಣ ಕೆಲಸ ಮಾಡುತ್ತಿದ್ದ ಹುಡುಗಿ ಇಂದು ಒಂದೊಂದು ಚಿತ್ರಕ್ಕೆ 5 ರಿಂದ 7 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ.
ಉದ್ಯಮ ಮತ್ತು ಐಷಾರಾಮಿ ಜೀವನ ಕೇವಲ ನಟನೆಯಷ್ಟೇ ಅಲ್ಲದೆ ಉದ್ಯಮಿಯಾಗಿಯೂ ಸಮಂತಾ ಗುರುತಿಸಿಕೊಂಡಿದ್ದಾರೆ. ಸಾಕಿ ಮತ್ತು ಟ್ರೂಲಿ ಸ್ಮಾ ಎಂಬ ಫ್ಯಾಷನ್ ಬ್ರಾಂಡ್ ಮೂಲಕ ಅವರು ಯಶಸ್ಸು ಕಂಡಿದ್ದಾರೆ. ಅಲ್ಲದೆ ಟ್ರಾಲಾಲ ಮೂವಿಂಗ್ ಪಿಕ್ಚರ್ಸ್ ಎಂಬ ಸ್ವಂತ ನಿರ್ಮಾಣ ಸಂಸ್ಥೆಯನ್ನು ಕೂಡ ಆರಂಭಿಸಿದ್ದಾರೆ. ಹೈದರಾಬಾದ್ ಮತ್ತು ಮುಂಬೈನಂತಹ ನಗರಗಳಲ್ಲಿ ಕೋಟ್ಯಂತರ ಮೌಲ್ಯದ ಐಷಾರಾಮಿ ಮನೆಗಳನ್ನು ಹೊಂದಿರುವ ಇವರ ಬಳಿ ಬಿಎಂಡಬ್ಲ್ಯೂ ಹಾಗೂ ಮರ್ಸಿಡಿಸ್ ಬೆಂಜ್ ಸೇರಿದಂತೆ ಅತ್ಯಂತ ದುಬಾರಿ ಕಾರುಗಳ ಸಂಗ್ರಹವೇ ಇದೆ.
ವೈಯಕ್ತಿಕ ಬದುಕು ಮತ್ತು ಸಿನಿಮಾ ವೈಯಕ್ತಿಕ ಜೀವನದ ಏಳುಬೀಳುಗಳ ನಡುವೆಯೂ ಸದಾ ಸಕ್ರಿಯರಾಗಿರುವ ಸಮಂತಾ ಇತ್ತೀಚೆಗಷ್ಟೇ ಚಿತ್ರನಿರ್ಮಾಪಕ ರಾಜ್ ನಿಡಿಮೋರು ಅವರನ್ನು ವಿವಾಹವಾಗಿದ್ದಾರೆ. ವೃತ್ತಿ ಬದುಕಿನ ಕಡೆಗೆ ಗಮನ ಹರಿಸಿರುವ ಇವರು ತಮ್ಮದೇ ನಿರ್ಮಾಣ ಸಂಸ್ಥೆಯಡಿ ಮಾ ಇಂಟಿ ಬಂಗಾರಂ ಎಂಬ ಸಿನಿಮಾವನ್ನು ಸಿದ್ಧಪಡಿಸಿದ್ದಾರೆ. ಈ ಸಿನಿಮಾ ಮೇ 15 ರಂದು ತೆರೆಕಾಣಲಿದ್ದು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ.

