HomeIndiaSHOCKING: ಮೃತ ಅಕ್ಕನ ಹೆಸರಲ್ಲಿದ್ದ ಠೇವಣಿ ಹಣ ಪಡೆಯಲು ಅಸ್ಥಿಪಂಜರವನ್ನು ಹೊತ್ತು ಬ್ಯಾಂಕ್ ಗೆ ಬಂದ...

SHOCKING: ಮೃತ ಅಕ್ಕನ ಹೆಸರಲ್ಲಿದ್ದ ಠೇವಣಿ ಹಣ ಪಡೆಯಲು ಅಸ್ಥಿಪಂಜರವನ್ನು ಹೊತ್ತು ಬ್ಯಾಂಕ್ ಗೆ ಬಂದ ತಮ್ಮ: ಬೆಚ್ಚಿಬಿದ್ದ ಅಧಿಕಾರಿಗಳು

ಭುವನೇಶ್ವರ: ಬುಡಕಟ್ಟು ಜನಾಂಗದ ಸಹೋದರನೊಬ್ಬ ತನ್ನ ಮೃತ ಅಕ್ಕನ ಠೇವಣಿ ಹಣ ಪಡೆಯಲು ಆಕೆಯ ಅಸ್ಥಿಪಂಜರವನ್ನೇ ಹೊತ್ತು ಬ್ಯಾಂಕ್ ಗೆ ಬಂದ ವಿಚಿತ್ರ ಘಟನೆ ಒಡಿಶಾದಲ್ಲಿ ನಡೆದಿದೆ.

ಬ್ಯಾಂಕ್ ನಲ್ಲಿ ಮೃತ ಅಕ್ಕನ ಹೆಸರಲ್ಲಿ 20,000 ಠೇವಣಿ ಇರುವುದು ಗೊತ್ತಾಗಿದೆ. ಆ ಹಣವನ್ನು ಪಡೆಯಲು ಬ್ಯಾಂಕ್ ಗೆ ಅಲೆದಾಡಿ ಅಲೆದಾಡಿ ಸುಸ್ತಾದ ವ್ಯಕ್ತಿ ಕೊನೆಗೆ ಬೇಸತ್ತು ಅಕ್ಕನ ಅಸ್ಥಿಪಂಜರವನ್ನು 3 ಕಿ.ಮೀ ಹೊತ್ತು ತಂದು ಬ್ಯಾಂಕ್ ಗೆ ಬಂದಿದ್ದಾನೆ. ಈ ಘಟನೆ ಇಡೀ ದೇಶವನ್ನೇ ಅಚ್ಚರಿಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಟಣಾ ತಾಲೂಕಿನ ದೈನಾಳಿ ಬುಡಕಟ್ಟು ಗ್ರಾಮದ ಅನಕ್ಷರಸ್ಥ ಜೀತು ಮುಂಡಾ (50) ಬ್ಯಾಂಕ್ ಗೆ ಸಹೋದರಿಯ ಅಸ್ಥಿಪಂಜರವನ್ನೇ ಹೊತ್ತು ತಂದ ವ್ಯಕ್ತಿ. ಜೀತು ಮುಂಡಾ ಅವರ ಅಕ್ಕ ಕರ್ಳಾ ಮುಂಡಾ (56) ಕಳೆದ ಜನವರಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆಕೆ ಹಸು ಮಾರಾಟ ಮಾಡಿ ಬಂದಿದ್ದ 20,000 ರೂಪಾಯಿ ಹಣವನ್ನು ಒಡಿಶಾ ಗ್ರಾಮೀಣ ಬ್ಯಾಂಕ್ ನ ಪಟಣಾ ತಾಲೂಕಿನ ಮಾಳಿಪೋಶಿ ಶಾಖೆಯಲ್ಲಿ ಠೇವಣಿ ಇಟ್ಟಿದ್ದರು.

ಸಹೋದರಿ ಕರ್ಳಾ ಅವರ ಸಾವಿನ ಬಳಿಕ ಜೀತು ಮುಂಡಾ ಠೇವಣಿ ಹಣ ಪಡೆಯಲು ಬ್ಯಾಂಕ್ ಗೆ ಅಲೆದಾಡಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿ ಆತ ಬುಡಕಟ್ಟು ಜನಾಂಗದ ವ್ಯಕ್ತಿ ಎಂಬುದನ್ನೂ ನೋಡದೇ ಎಂದಿನಂತೆ ತಮ್ಮ ಚಾಳಿಯಂತೆ ಸಹೋದರಿಯ ಮರಣ ಪ್ರಮಾಣ ಪತ್ರ ಹಾಗೂ ಇತರ ದಾಖಲೆ ನೀಡುವಂತೆ ಕೇಳಿದ್ದಾರೆ. ದಾಖಲೆಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಜೀತು ಮುಂಡಾ ಕೆಲ ದಿನಗಳ ಬಳಿಕ ಮತ್ತೆ ಬ್ಯಾಂಕ್ ಗೆ ಹೋಗಿ ಠೇವಣಿ ಹಣ ಕೇಳಿದ್ದಾರೆ. ಪದೇ ಪದೇ ಜೀತು ಕೇಳಿದ ದಾಖಲೆ ನೀಡದೇ ಠೇವಣಿ ಹಣ ಕೇಳುತ್ತಿರುವುದಕ್ಕೆ ಕೋಪಗೊಂಡ ಬ್ಯಾಂಕ್ ಸಿಬ್ಬಂದಿ ನಿಮ್ಮ ಅಕ್ಕ ಮೃತಪಟ್ಟಿದ್ದಾರೆ ಎಂಬುದಕ್ಕೆ ಏನು ದಾಖಲೆ ಇದೆ? ಅದನ್ನು ತೆಗೆದುಕೊಂಡು ಬಾ. ಬಳಿಕ ಹಣ ತೆಗೆದುಕೊಂಡು ಹೋಗು ಎಂದು ಗದರಿದ್ದಾರೆ.

ಬ್ಯಾಂಕ್ ಗೆ ಅಲೆದಾಡಿ ನೊಂದಿದ್ದ ಜೀತು ಮುಂಡಾ ಬೇರೆ ದಾರಿ ಕಾಣದೇ ಸ್ಮಶಾನಕ್ಕೆ ಹೋಗಿ ತನ್ನ ಅಕ್ಕ ಕರ್ಳಾರನ್ನು ಹೂತು ಹಾಕಿದ್ದ ಜಾಗವನ್ನು ಅಗೆದು ಆಕೆಯ ಅಸ್ಥಿಪಂಜರವನ್ನು ಹೊರತೆಗಿದ್ದಾರೆ. ಬಳಿಕ ಅಸ್ಥಿಪಂಜರವನ್ನು ಚೀಲದಲ್ಲಿ ಕಟ್ಟಿ ತನ್ನ ಹೆಗಲ ಮೇಲೆ ಹೊತ್ತುಕೊಂಡು 3 ಕಿ.ಮೀ ಸಾಗಿ ಬ್ಯಾಂಕ್ ತಲುಪಿದ್ದಾರೆ. ಅಕ್ಕನ ಅಸ್ಥಿಪಂಜರದೊಂದಿಗೆ ಬಂದ ಜೀತು ಬ್ಯಾಂಕ್ ಸಿಬ್ಬಂದಿಗಳಿಗೆ ಈಕೇಯೆ ತನ್ನ ಅಕ್ಕ, ಸಾವನ್ನಪ್ಪಿದ್ದಾಳೆ. ಈಗಲಾದರೂ ಠೇವಣಿ ಇಟ್ಟಿದ್ದ ಹಣ ಕೊಡಿ ಎಂದು ಗೋಗರೆದಿದ್ದಾರೆ.

ಅಸ್ಥಿಪಂಜರವನ್ನು ನೋಡಿ ದಂಗಾದ ಬ್ಯಾಂಕ್ ಅಧಿಕಾಕಾರಿಗಳು, ಸಿಬ್ಬಂದಿಗಳು ಬ್ಯಾಂಕ್ ಬಾಗಿಲು ಹಾಕಿಕೊಂಡು ಒಳಸೇರಿದ್ದಾರೆ. ಇದರಿಂದ ಕಂಗಾಲಾದ ಜೀತು ಅಸ್ಥಿಪಂಜರದೊಂದಿಗೆ ಬ್ಯಾಂಕ್ ಬಾಗಿಲಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಬ್ಯಾಂಕ್ ನಿಯಮಾವಳಿಗಳ ಬಗ್ಗೆ ತಿಳಿಸಿ ತಾವು ಸಹಾಯ ಮಾಡುವುದಾಗಿ ಪೊಲೀಸ್ ಸಿಬ್ಬಂದಿ ಜೀತು ಮನವೊಲಿಸಿದ್ದಾರೆ.

ಜೀತು ಮುಂಡಾ ಅಸ್ಥಿಪಂಜರವನ್ನು ಹೆಗಲ ಮೇಲೆ ಹೊತ್ತು 3ಕೀ.ಮಿ ನಡೆದು ಬ್ಯಾಂಕ್ ಗೆ ಬಂದ ದೃಶ್ಯ ಭಾರಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನಕ್ಷರಸ್ಥ, ಬುಡಕಟ್ಟು ಜನಾಂಗದ ವ್ಯಕ್ತಿಯ ಸ್ಥಿತಿಯನ್ನು ಕಂಡು ಸಹಾಯ ಮಾಡುವುದನ್ನು ಬಿಟ್ಟು ಬ್ಯಾಂಕ್ ಗೆ ಅಲೆದಾಡಿಸಿ ದರ್ಪ ಮೆರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular