ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಆಯ್ಕೆಯಾಗಿದ್ದಾರೆ. ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಪರ 38 ಮತಗಳು ಚಲಾವಣೆಯಾಗಿವೆ.
ಇತ್ತೀಚೆಗೆ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಹುದ್ದೆ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಸಲೀಂ ಅಹ್ಮದ್ ಅವರನ್ನು ಕಾಂಗ್ರೆಸ್ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.ಸಲೀಂ ಅಹ್ಮದ್ ಪರ 38 ಮತಗಳು ಚಲಾವಣೆಯಾಗಿವೆ. ಹಾಗೂ ಅವರ ವಿರುದ್ಧವಾಗಿ 30 ಮತಗಳು ಚಲಾವಣೆಯಾಗಿದೆ. ಧ್ವನಿಮತದ ಮೂಲಕ ಅವರನ್ನು ಆಯ್ಕೆ ಮಾಡಲಾಯಿತು.
ಸಲೀಂ ಅಹ್ಮದ್ ಅವರು ಹುಬ್ಬಳ್ಳಿ-ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇತ್ತೀಚಿನವರೆಗೆ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದರು.
ನೂತನ ಸಭಾಪತಿಯಾಗಿ ಆಯ್ಕೆಯಾದ ಬಳಿಕ ಸಲೀಂ ಅಹ್ಮದ್ ಅವರಿಗೆ ಕಾಂಗ್ರೆಸ್ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಮೇಲ್ಮನೆಯ ಕಲಾಪವನ್ನು ಪರಿಣಾಮಕಾರಿಯಾಗಿ ನಡೆಸುವ ಜವಾಬ್ದಾರಿ ಇದೀಗ ಅವರ ಮೇಲಿದೆ.

