HomeCrimeಇಂಜೆಕ್ಷನ್, ಇನ್‌ಸ್ಟಾ ಪೋಸ್ಟ್, ವೈರಲ್ ವಿಡಿಯೋ: ರಾಜಸ್ಥಾನದ ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು!

ಇಂಜೆಕ್ಷನ್, ಇನ್‌ಸ್ಟಾ ಪೋಸ್ಟ್, ವೈರಲ್ ವಿಡಿಯೋ: ರಾಜಸ್ಥಾನದ ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು!

ರಾಜಸ್ಥಾನದ ಪ್ರಸಿದ್ಧ ಕಥಾ ವಾಚಕಿ ಸಾಧ್ವಿ ಪ್ರೇಮ್ ಬೈಸಾ ಜನವರಿ 28ರಂದು ಜೋಧ್‌ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬರುವಷ್ಟರಲ್ಲಿಯೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಈ ಸಾವು ನಿಗೂಢವಾಗಿದ್ದು, ಹಲವಾರು ಪಶ್ನೆಗಳನ್ನು ಎತ್ತಿದೆ.

ಸಾಧ್ವಿ ಪ್ರೇಮ್ ಬೈಸಾ ಮೃತಪಟ್ಟ ಸುಮಾರು 4 ಗಂಟೆಗಳ ಬಳಿಕ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಲಾಗಿದೆ. “ನನಗೆ ಬದುಕಿದ್ದಾಗ ನ್ಯಾಯ ಸಿಗಲಿಲ್ಲ, ಸಾವಿನ ನಂತರವಾದರೂ ಸಿಗಬಹುದು” ಎಂದು ಬರಹವಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ.

ಸದ್ಯದ ಮಾಹಿತಿ ಪ್ರಕಾರ ಇಂಜೆಕ್ಷನ್‌ನಿಂದಾಗಿ ಸಾಧ್ವಿ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಸಾವಿಗೆ ಇಂಜೆಕ್ಷನ್ ಕಾರಣವೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಧ್ವಿ ಪ್ರೇಮ್‌ ಜ್ವರದಿಂದ ಬಳಲುತ್ತಿದ್ದರು. ಆಗ ಆಶ್ರಮದಲ್ಲಿ ವ್ಯಕ್ತಿಯೊಬ್ಬರು ಅವರಿಗೆ ಇಂಜೆಕ್ಷನ್ ನೀಡಿದ್ದರು. ಆ ಇಂಜೆಕ್ಷನ್ ನೀಡಿದ ಕೆಲವೇ ನಿಮಿಷಗಳಲ್ಲಿ ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ್ದಾರೆ ಎಂಬುದು ಆರೋಪವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಸಾಧ್ವಿ ಪ್ರೇಮ್ ಬೈಸಾ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದೆ. ಇದು ಈಗ ರಾಜಕೀಯ ನಾಯಕರ ವಾಕ್ಸಮರಕ್ಕೂ ಕಾರಣವಾಗಿದೆ.

ಜಾಟ್ ಸಮುದಾಯದ ಪ್ರಭಾವಿ ನಾಯಕ, ಆರ್‌ಎಲ್‌ಪಿ ನಾಯಕ ಹನುಮಾನ್ ಬೇನಿವಾಲ್ ಈ ಸಾವು ನಿಗೂಢವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಹಲವಾರು ಜನರು ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.

ಬುಧವಾರ ಸಂಜೆ ಸಾಧ್ವಿ ಪ್ರೇಮ್ ಬೈಸಾ ಅವರನ್ನು ತಂದೆ ವೀರಂ ನಾಥ್ ಮತ್ತು ಇನ್ನೊಬ್ಬ ಸಹಾಯಕರು ಬೋರನಾಡ ಆಶ್ರಮದಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಆಸ್ಪತ್ರೆಗೆ ಬರುವಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು.

ವೈದ್ಯ ಪ್ರವೀಣ್ ಜೈನ್ ಮಾತನಾಡಿ, “ಸಾಧ್ವಿಯವರನ್ನು ಉಳಿಸಲು ತಾವು ಪ್ರಯತ್ನ ಮಾಡಿದ್ದೇವೆ. ಆದರೆ ಅವರ ದೇಹದಲ್ಲಿ ಯಾವುದೇ ಚಲನವಲನವಿರಲಿಲ್ಲ. ಸಾಧ್ವಿಯ ತಂದೆ ಹಾಗೂ ಗುರೂಜಿ ಆಗಿರುವ ವೀರಂ ನಾಥ್ ಸಾಧ್ವಿಗೆ ಜ್ವರವಿದ್ದ ಕಾರಣ ಆಶ್ರಮಕ್ಕೆ ಒಬ್ಬ ಕಂಪೌಂಡರ್ ಅವರನ್ನು ಕರೆಸಲಾಗಿತ್ತು ಅವರು ಇಂಜೆಕ್ಷನ್ ನೀಡಿದ ತಕ್ಷಣ ಸಾಧ್ವಿ ಪ್ರಜ್ಞೆ ತಪ್ಪಿದ್ದರು ಎಂದು ನಮಗೆ ತಿಳಿಸಿದರು” ಎಂದರು.

ಮರಣೋತ್ತರ ಪರೀಕ್ಷೆಗಾಗಿ ಸಾಧ್ವಿ ಪ್ರೇಮ್ ಬೈಸಾ ಶವವನ್ನು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ವೈದ್ಯ ಪ್ರವೀಣ್ ಜೈನ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಆದರೆ ವೀರಂ ನಾಥ್ ಅದನ್ನು ನಿರಾಕರಿಸಿ ಖಾಸಗಿ ಕಾರಿನಲ್ಲಿಯೇ ಶವ ತೆಗೆದುಕೊಂಡು ಹೋಗಿದ್ದಾರೆ.

ವೀರಂ ನಾಥ್ ಅವರ ಪ್ರಕಾರ ಸಾಧ್ವಿ ಹಲವು ದಿನಗಳಿಂದ ಶೀತ, ಕಫದಿಂದ ಬಳಲುತ್ತಿದ್ದರು. ಆಕೆಗೆ ಜ್ವರ ಬಂದ ಕಾರಣ ಆಶ್ರಮಕ್ಕೆ ಕಾಪೌಂಡರ್ ಕರೆಸಲಾಗಿತ್ತು. ಆದರೆ ಅವರು ಬಂದು ಇಂಜೆಕ್ಷನ್ ನೀಡಿದ 5 ನಿಮಿಷಗಳ ಬಳಿಕ ಸಾಧ್ವಿಗೆ ಪ್ರಜ್ಞೆ ತಪ್ಪಿತ್ತು.

ಆಶ್ರಮಕ್ಕೆ ಆಗಮಿಸಿದ್ದ ಕಾಪೌಂಡರ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವರು ತಂದಿದ್ದ ವೈದ್ಯಕೀಯ ಕಿಟ್‌ ಅನ್ನು ಸೀಜ್ ಮಾಡಲಾಗಿದೆ. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ಘಟನೆ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಇನ್ ಸ್ಟಾ ಗ್ರಾಮ್ ಪೋಸ್ಟ್: ಸಾಧ್ವಿ ಪ್ರೇಮ್ ಬೈಸಾ ಮೃತಪಟ್ಟ ಬಳಿಕ ಅವರ ಇನ್‌ ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಲಾಗಿದೆ. “ಸನಾತನ ಧರ್ಮದ ಪ್ರಚಾರಕ್ಕಾಗಿ ನಾನು ಪ್ರತಿ ಕ್ಷಣವನ್ನೂ ಬದುಕಿದ್ದೇನೆ. ನನ್ನ ಜೀವನದುದ್ದಕ್ಕೂ ಆದಿ ಜಗದ್ಗುರು ಶಂಕರಾಚಾರ್ಯರು, ವಿಶ್ವದ ಯೋಗ ಗುರುಗಳು ಮತ್ತು ಪೂಜ್ಯ ಸಂತ-ಮುನಿಗಳ ಆಶೀರ್ವಾದವನ್ನು ನಾನು ಪಡೆದಿದ್ದೇನೆ. ನಾನು ಅಗ್ನಿಪರೀಕ್ಷೆಗೆ ಅವಕಾಶ ನೀಡಬೇಕೆಂದು ಕೋರಿ ಆದಿ ಗುರು ಶಂಕರಾಚಾರ್ಯರಿಗೆ ಮತ್ತು ದೇಶದ ಅನೇಕ ಮಹಾನ್ ಸಂತರಿಗೆ ಪತ್ರಗಳನ್ನು ಬರೆದಿದ್ದೆ, ಆದರೆ ವಿಧಿಯ ಆಟವೇ ಬೇರೆಯಾಗಿತ್ತು” ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ.

“ನಾನು ಈ ಪ್ರಪಂಚಕ್ಕೆ ಶಾಶ್ವತವಾಗಿ ವಿದಾಯ ಹೇಳುತ್ತಿದ್ದೇನೆ, ಆದರೆ ನನಗೆ ದೇವರ ಮೇಲೆ ಮತ್ತು ಪೂಜ್ಯ ಸಂತ-ಮುನಿಗಳ ಮೇಲೆ ಸಂಪೂರ್ಣ ನಂಬಿಕೆಯಿದೆ. ನನ್ನ ಜೀವಿತಾವಧಿಯಲ್ಲಿ ಸಿಗದಿದ್ದರೂ, ನನ್ನ ಮರಣದ ನಂತರವಾದರೂ ನನಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ” ಎಂದು ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿ ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular