ಬೆಂಗಳೂರು- ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ಬಳಿಕ 397 ಹೆಸರುಗಳಿಗೆ 803 ಮತದಾರರ ಗುರುತಿನ ಚೀಟಿಗಳು (Voter IDs) ಜೋಡಣೆಯಾಗಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಸ್ಪಷ್ಟನೆ ನೀಡಿದೆ.
ಮತದಾರರ ದತ್ತಾಂಶ ಸಂಸ್ಕರಣೆ ವೇಳೆ ಉಂಟಾದ ಎರಡು ಪ್ರತ್ಯೇಕ ಕಾರ್ಯವಿಧಾನದ ಸನ್ನಿವೇಶಗಳಿಂದ ಈ ರೀತಿಯ ಸಮಸ್ಯೆಗಳು ಕಂಡುಬಂದಿವೆ ಎಂದು ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
ಒಂದೇ ವ್ಯಕ್ತಿಗೆ ಹಲವು EPIC ಸಂಖ್ಯೆಗಳು
ಎಸ್‌ಐಆರ್ ಸಂದರ್ಭದಲ್ಲಿ ಕೆಲವು ಅರ್ಜಿದಾರರು ಸಿಟಿಜನ್ ಸರ್ವಿಸ್ ಪೋರ್ಟಲ್ ಮೂಲಕ ಒಂದಕ್ಕಿಂತ ಹೆಚ್ಚು ನಮೂನೆ-6 (Form 6) ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಪ್ರಕ್ರಿಯೆಗೊಳಿಸಿದ್ದರಿಂದ, ಒಂದೇ ವ್ಯಕ್ತಿಗೆ ಅಕಸ್ಮಿಕವಾಗಿ ಒಂದಕ್ಕಿಂತ ಹೆಚ್ಚು EPIC ಸಂಖ್ಯೆಗಳು ಸೃಷ್ಟಿಯಾಗಿವೆ ಎಂದು ಸ್ಪಷ್ಟಪಡಿಸಲಾಗಿದೆ.
ಎರಡು ಕ್ಷೇತ್ರಗಳಲ್ಲಿ ಒಂದೇ EPIC ಸಂಖ್ಯೆ
ಇನ್ನು ಕೆಲವು ಪ್ರಕರಣಗಳಲ್ಲಿ ಮತದಾರರು ಸ್ಥಳಾಂತರಕ್ಕಾಗಿ ಸಲ್ಲಿಸಿದ್ದ ನಮೂನೆ-8 (Form 8) ಅರ್ಜಿಗಳು ಅನುಮೋದನೆಯಾಗಿದ್ದು, ಅವರ ಹೆಸರು ಹೊಸ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಿಸಲಾಗಿತ್ತು. ಆದರೆ, ಹಿಂದಿನ ಕ್ಷೇತ್ರದಿಂದ ಹೆಸರು ತೆಗೆದುಹಾಕಲು ಸಲ್ಲಿಸಬೇಕಿದ್ದ ನಮೂನೆ-7 (Form 7) ಅರ್ಜಿಗಳು ಬಾಕಿ ಉಳಿದಿದ್ದವು.
ಮತದಾರರ ಪಟ್ಟಿಯನ್ನು ಅಂತಿಮವಾಗಿ ಪ್ರಕಟಿಸುವ ಸಂದರ್ಭದಲ್ಲಿ ಕಾನೂನುಬದ್ಧವಾಗಿ ಪಟ್ಟಿಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕಾದ statutory freezing ಕಾರಣದಿಂದಾಗಿ ಕೆಲವು ಮತದಾರರ ವಿವರಗಳು ಹಳೆಯ ಮತ್ತು ಹೊಸ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ
ಒಬ್ಬ ಮತದಾರರಿಗೆ ಹಲವು EPIC ಸಂಖ್ಯೆಗಳು ಇರುವುದು ಹಾಗೂ ಒಂದೇ EPIC ಸಂಖ್ಯೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುವ ಪ್ರಕರಣಗಳನ್ನು ಈಗಾಗಲೇ ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮತದಾರರ ನೋಂದಣಿ ಅಧಿಕಾರಿಗಳಿಗೆ ಕಳುಹಿಸಲಾಗಿದೆ.
ಅವರು ಪ್ರಕರಣಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ಅಗತ್ಯ ತಿದ್ದುಪಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
ಮತದಾರರ ಪಟ್ಟಿಯಲ್ಲಿ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

