ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ರೌಡಿಶೀಟರ್ ಪಳನಿ ಅಲಿಯಾಸ್ ಕರ್ಚಿಫ್ ಪಳನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಫೆ. 5ರಂದು ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಪರಿಶೀಲಿಸುತ್ತಿದ್ದ ವೇಳೆ ಆರೋಪಿ ಪೊಲೀಸರಿಗೆ ಬೆದರಿಕೆ ಹಾಕಿದ್ದ. ಅಶೋಕನಗರ, ಕೋಣನಕುಂಟೆ, ಕೆಎಸ್ ಲೇಔಟ್, ವಿಲ್ಸನ್ ಗಾರ್ಡನ್, ಬೆಳ್ಳಂದೂರು ಮತ್ತು ಇತರೆ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಕಳ್ಳತನ ಸೇರಿ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿ ಪಳನಿ ಬೇಕಾಗಿದ್ದ.
ಕಸವನಹಳ್ಳಿಯ ಸ್ಲಂ ಬೋರ್ಡ್ ಮನೆಯಲ್ಲಿ ವಾಸವಾಗಿದ್ದು, ಸ್ಥಳೀಯರನ್ನು ಬೆದರಿಸುತ್ತಿದ್ದ. ನಾನು ಹಲವು ಕೊಲೆ ಮಾಡಿದ್ದೇನೆ. ನಾನು ಹೇಳಿದಂತೆ ಕೇಳಬೇಕು .ನನಗೆ ಹಣ ಕೊಡಬೇಕು ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿಚಾರಣೆಗೆ ತೆರಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದ. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

