ಮಾಸ್ಕೋ: ರಷ್ಯಾದ ಬಾಷ್ಕೋರ್ಟೋಸ್ತಾನ್ ಗಣರಾಜ್ಯದ ವಿಶ್ವವಿದ್ಯಾಲಯವೊಂದರಲ್ಲಿ ಶನಿವಾರ ನಡೆದ ಇರಿತ ದಾಳಿಯಲ್ಲಿ ನಾಲ್ವರು ಭಾರತೀಯರು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಆರಂಭಿಕ ಮಾಹಿತಿಯ ಪ್ರಕಾರ, ಚಾಕು ಹೊಂದಿದ್ದ ಹದಿಹರೆಯದ ಬಾಲಕನೊಬ್ಬ ಉಫಾದಲ್ಲಿರುವ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯದೊಳಗೆ ಪ್ರವೇಶಿಸಿದ್ದಾನೆ. ಕಟ್ಟಡದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದಾನೆ. ಇದರಿಂದಾಗಿ ಅವರಲ್ಲಿ ಹಲವರಿಗೆ ಇರಿತದ ಗಾಯಗಳಾಗಿವೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ದಾಳಿಕೋರನ ಬಂಧಿಸಿದ್ದು, ಈ ಸಮಯದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಇರಿಯಲಾಗಿದೆ. ಶಂಕಿತನು ತನ್ನ ಮೇಲೆಯೇ ದೈಹಿಕ ಹಾನಿಯನ್ನುಂಟುಮಾಡಿಕೊಂಡನು ಎಂದು ಆಂತರಿಕ ಸಚಿವಾಲಯದ ವಕ್ತಾರೆ ಮೇಜರ್ ಜನರಲ್ ಐರಿನಾ ವೋಲ್ಕ್ ಹೇಳಿದ್ದಾರೆ.
ಕಜಾನ್ನಲ್ಲಿರುವ ಕಾನ್ಸುಲೇಟ್ನ ಅಧಿಕಾರಿಗಳು ಉಫಾಗೆ ತೆರಳುತ್ತಿದ್ದು, ಸಂತ್ರಸ್ತರಿಗೆ ಅಗತ್ಯ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ರಷ್ಯಾದ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಉಫಾದಲ್ಲಿ ದುರದೃಷ್ಟಕರ ದಾಳಿ ನಡೆದಿದೆ. ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ. ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಕಜಾನ್ನಲ್ಲಿರುವ ಕಾನ್ಸುಲೇಟ್ನ ಅಧಿಕಾರಿಗಳು ಗಾಯಗೊಂಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಉಫಾಗೆ ತೆರಳುತ್ತಿದ್ದಾರೆ ಎಂದು ತಿಳಿಸಿದೆ.
ಗಾಯಾಳುಗಳಿಗೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದೆ. ಇತರ ಮೂವರು ಸ್ಥಿರ ಆದರೆ ಮಧ್ಯಮ ಸ್ಥಿತಿಯಲ್ಲಿದ್ದಾರೆ. ವೈದ್ಯರು ವೈದ್ಯಕೀಯ ಆರೈಕೆಯನ್ನು ಮುಂದುವರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
15 ವರ್ಷದ ಬಾಲಕ ಆಪಾದಿತ ದಾಳಿಕೋರನನ್ನು ಸಹ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆತನನ್ನು ಸ್ಥಳೀಯ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮಾಸ್ಕೋದಿಂದ ಸುಮಾರು 1,200 ಕಿಲೋಮೀಟರ್ ಪೂರ್ವದಲ್ಲಿರುವ ಉಫಾದಲ್ಲಿ ಹಿರಿಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಆರೋಪಿತ ಬಾಲಕ ನಿಷೇಧಿತ ನವ-ನಾಜಿ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾನೆಂದು ನಂಬಲಾಗಿದೆ. ದಾಳಿಯ ಸಮಯದಲ್ಲಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ರಾಷ್ಟ್ರೀಯತಾವಾದಿ ಘೋಷಣೆಗಳನ್ನು ಕೂಗಿದ್ದಾನೆ.

