ಏಪ್ರಿಲ್ 5ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್‌ಗಳ ಬೃಹತ್ ಗೆಲುವನ್ನು ಕಂಡು ಟೂರ್ನಿಯಲ್ಲಿ ಎರಡನೇ ಜಯವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆರಿಸಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಕಲೆಹಾಕಿ ಚೆನ್ಮೈ ಸೂಪರ್ ಕಿಂಗ್ಸ್ ತಂಡಕ್ಕೆ 251 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್‌ಗಳಲ್ಲಿ 207 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿತು.
ಆರಂಭಿಕರಿಂದ ಸಾಮಾನ್ಯ ಆರಂಭ ಪಡೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ದೇವದತ್ ಪಡಿಕಲ್, ನಾಯಕ ರಜತ್ ಹಾಗೂ ಟೀಮ್ ಡೇವಿಡ್ ಅಬ್ಬರಿಸಿ ಬೊಬ್ಬೆರಿದರು. ಟಿಮ್ ಡೇವಿಡ್ ಮೊದಲ ಆರು ಎಸೆತಗಳಲ್ಲಿ ನಿಧಾನಗತಿಯ ಆಟವನ್ನಾಡಿ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 70 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಹೀಗೆ ಅಬ್ಬರಿಸಿ ಬೊಬ್ಬಿರದ ಟಿಮ್ ಡೇವಿಡ್ ಆಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮಾತ್ರ ಟಿಮ್ ಡೇವಿಡ್ ಹೊಡೆದ ಬೌಂಡರಿಗಳ ಪೈಕಿ ಹಲವಾರು ಬೌಂಡರಿಗಳು ಕೆಟ್ಟ ಎಸೆತಗಳಾಗಿದ್ದವು, ಟಿಮ್ ಡೇವಿಡ್ ಪ್ರತಿಭೆಯಿಂದ ಬಂದದ್ದಲ್ಲ ಎಂದಿದ್ದಾರೆ.
ಹೌದು, ಟಿಮ್ ಡೇವಿಡ್ ಬ್ಯಾಟಿಂಗ್ ಕುರಿತು ಅರುಣ್ ಗೋಪಾಲಕೃಷ್ಣನ್ ಎಂಬ ನೆಟ್ಟಿಗ ಟ್ವೀಟ್ ಮಾಡಿದ್ದು, ‘ಸಿಎಸ್‌ಕೆ ವಿರುದ್ಧ ಟಿಮ್ ಡೇವಿಡ್ ಆಡಿದ ಆಟದ ಬಗ್ಗೆ ನೀವು ಪ್ರಾಮಾಣಿಕರಾಗಿ ಹೇಳಿದರೆ, ಆತ ಹೊಡೆದ ಎಂಟು ಸಿಕ್ಸರ್‌ಗಳ ಪೈಕಿ ಏಳು ಸಿಕ್ಸರ್‌ಗಳು ‘ಹಿಟ್-ಮಿ’ ಎಸೆತಗಳಲ್ಲಿ ( ಸುಲಭವಾಗಿ ಬೌಂಡಿರ ಬಾರಿಸಬಲ್ಲ ಎಸೆತಗಳು) ಬಂದವು. ಇಂತಹ ಕೆಟ್ಟ ಆಟವನ್ನು ನಾನು ಹಲವು ದಿನಗಳಿಂದ ಕಂಡಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟನ್ನು ಶೇರ್ ಮಾಡಿರುವ ರಾಬಿನ್ ಉತ್ತಪ್ಪ ‘ಫ್ಯಾಕ್ಟ್ಸ್’ ( ಸತ್ಯಗಳು ) ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಟಿಮ್ ಡೇವಿಡ್ ಲಕ್‌ನಿಂದ ಹೊಡೆದ ಹೊಡೆತಗಳು ಎಂದು ರಾಬಿನ್ ಉತ್ತಪ್ಪ ಟ್ರೋಲ್ ಮಾಡಿದ್ದಾರೆ. ರಾಬಿನ್ ಉತ್ತಪ್ಪ ಅವರ ಈ ಟ್ವೀಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳನ್ನು ಕೆರಳಿಸಿದ್ದು, ಈ ಹಿಂದೆ ಉತ್ತಪ್ಪ ಟಿ ಟ್ವೆಂಟಿಯನ್ನು ಟೆಸ್ಟ್ ಕ್ರಿಕೆಟ್ ರೀತಿ ಆಡಿದ ಇನ್ನಿಂಗ್ಸ್‌ಗಳನ್ನು ಉಲ್ಲೇಖಿಸಿ ತಿರುಗೇಟು ಕೊಟ್ಟಿದ್ದಾರೆ.

