ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಬಹುದಿನಗಳ ಪ್ರೇಮ ಕಥೆ ಈಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಉದಯಪುರದಲ್ಲಿ ನಡೆದ ಅದ್ಧೂರಿ ಹಾಗೂ ಆಪ್ತ ಸಮಾರಂಭದಲ್ಲಿ ಈ ಜೋಡಿ ಹಸೆಮಣೆ ಏರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರ ಮದುವೆಯ ಫೋಟೋಗಳು ವೈರಲ್ ಆಗಿವೆ. ಆದರೆ, ಈ ಸಂತಸದ ನಡುವೆಯೇ ರಶ್ಮಿಕಾ ಅವರ ಮೊದಲ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕೇಳಿದ ಪ್ರಶ್ನೆಯೊಂದಕ್ಕೆ ನೀಡಿದ ಪ್ರತಿಕ್ರಿಯೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮಂತ್ರಾಲಯದಲ್ಲಿ ನಡೆದ ಶ್ರೀ ರಾಘವೇಂದ್ರ ಗುರು ವೈಭವೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿ ಅವರಿಗೆ ಮಾಧ್ಯಮದವರು ರಶ್ಮಿಕಾ ಮಂದಣ್ಣ ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. “ಸರ್, ರಶ್ಮಿಕಾ ಮಂದಣ್ಣ ಈಗ ಮದುವೆಯಾಗಿದ್ದಾರೆ, ನಿಮಗೆ ಆಮಂತ್ರಣ ಪತ್ರಿಕೆ ಬಂದಿತ್ತಾ?” ಎಂದು ಪತ್ರಕರ್ತರೊಬ್ಬರು ಕೇಳಿದ ತಕ್ಷಣ ರಿಷಬ್ ಶೆಟ್ಟಿ ನಡೆದುಕೊಂಡ ರೀತಿ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಪ್ರಶ್ನೆ ಕೇಳುತ್ತಿದ್ದಂತೆ ಎದ್ದು ಹೋದ ರಿಷಬ್! ರಶ್ಮಿಕಾ ಮದುವೆಯ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ರಿಷಬ್ ಶೆಟ್ಟಿ ಯಾವುದೇ ಉತ್ತರ ನೀಡದೆ ಕ್ಷಣಕಾಲ ಮೌನಕ್ಕೆ ಶರಣಾದರು. ಬಳಿಕ ಮುಗುಳ್ನಗುತ್ತಾ ಕೇವಲ “ಥ್ಯಾಂಕ್ಯೂ” ಎಂದು ಹೇಳಿ ಸಂದರ್ಶನದ ಜಾಗದಿಂದ ಅರ್ಧಕ್ಕೇ ಎದ್ದು ನಡೆದರು. ಈ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ರಶ್ಮಿಕಾ ಮತ್ತು ರಿಷಬ್ ನಡುವಿನ ಹಳೆಯ ಕಹಿ ಘಟನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
ಹಳೆಯ ಕಿರಿಕ್ ಮತ್ತೆ ನೆನಪು: ರಶ್ಮಿಕಾ ಮಂದಣ್ಣ ಅವರು ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಸಮಯದಲ್ಲಿ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ನಂತರದ ದಿನಗಳಲ್ಲಿ ಅದು ಮುರಿದುಬಿದ್ದಿತ್ತು. ಇದಾದ ಬಳಿಕ ರಶ್ಮಿಕಾ ಅವರು ರಕ್ಷಿತ್ ಅವರ ‘ಪರಂವಃ ಸ್ಟುಡಿಯೋಸ್’ ಬಗ್ಗೆ ನೀಡಿದ್ದ ಒಂದು ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿತ್ತು. ಅಂದು ರಿಷಬ್ ಶೆಟ್ಟಿ ಕೂಡ “ಇಂತಹ ನಟಿಯರ ಜೊತೆ ಕೆಲಸ ಮಾಡುವುದಕ್ಕಿಂತ ಹೊಸಬರ ಜೊತೆ ಕೆಲಸ ಮಾಡುವುದೇ ಲೇಸು” ಎಂಬರ್ಥದಲ್ಲಿ ವ್ಯಂಗ್ಯವಾಡಿದ್ದರು.
ಮಾರ್ಚ್ 4ಕ್ಕೆ ಆರತಕ್ಷತೆ: ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 26 ರಂದು ಹಸೆಮಣೆ ಏರಿದ್ದು, ಕೇವಲ ಕುಟುಂಬದವರು ಮತ್ತು ಆತ್ಮೀಯ ಸ್ನೇಹಿತರು ಮಾತ್ರ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸದ್ಯ ಹೈದರಾಬಾದ್‌ಗೆ ಮರಳಲಿರುವ ಈ ನವಜೋಡಿ ಮಾರ್ಚ್ 4 ರಂದು ಚಿತ್ರರಂಗದ ಗಣ್ಯರಿಗಾಗಿ ಮತ್ತು ಸ್ನೇಹಿತರಿಗಾಗಿ ಅದ್ಧೂರಿ ರಿಸೆಪ್ಷನ್ ಹಮ್ಮಿಕೊಳ್ಳುವ ನಿರೀಕ್ಷೆಯಿದೆ.

